ಉದಯವಾಹಿನಿ, ಕಾರ್ತಿಕ್ ಆರ್ಯನ್ ಬಾಲಿವುಡ್​ನ ಬಲು ಜನಪ್ರಿಯ ಯುವನಟ. ಕಾರ್ತಿಕ್ ನಟಿಸಿರುವ ಕಳೆದ ಎರಡು ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡಿವೆ. ಇದೀಗ ಅವರು ‘ಆಶಿಖಿ 3’ ಸಿನಿಮಾನಲ್ಲಿ ಶ್ರೀಲೀಲಾ ಜೊತೆಗೆ ನಟಿಸುತ್ತಿದ್ದಾರೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದು ಈಗ ಸ್ಟಾರ್ ಆಗಿ ಮೆರೆಯುತ್ತಿರುವ ಕಾರ್ತಿಕ್ ಆರ್ಯನ್​ಗೆ ಇದೀಗ ಬಾಲಿವುಡ್ ಚಿತ್ರರಂಗವೇ ಎಚ್ಚರಿಕೆ ನೀಡಿದೆ. ಅದೂ ಒಂದು ಗಂಭೀರ ವಿಷಯಕ್ಕಾಗಿ.
ಅಮೆರಿಕದ ಹ್ಯೂಸ್ಟನ್​​ನಲ್ಲಿ ಆಗಸ್ಟ್ 15 ರಂದು ನಡೆಯಲಿರುವ ‘ಆಜಾದಿ ಉತ್ಸವ್’ ಕಾರ್ಯಕ್ರಮದಲ್ಲಿ ಕಾರ್ತಿಕ್ ಆರ್ಯನ್ ಭಾಗವಹಿಸಲಿದ್ದಾರೆ. ಈಗಾಗಲೇ ‘ಆಜಾದಿ ಉತ್ಸವ್’ ಕಾರ್ಯಕ್ರಮದ ಸಾಮಾಜಿಕ ಜಾಲತಾಣ ಪೋಸ್ಟ್​ಗಳು ಹರಿದಾಡುತ್ತಿವೆ. ಕಾರ್ಯಕ್ರಮದಲ್ಲಿ ಕಾರ್ತಿಕ್ ಆರ್ಯನ್ ಭಾಗವಹಿಸುತ್ತಿದ್ದಾರೆಂದು ಜೋರು ಪ್ರಚಾರ ಸಹ ಮಾಡಲಾಗಿದೆ. ಆದರೆ ಇದೀಗ ಈ ಕಾರ್ಯಕ್ರಮದ ವಿಷಯವಾಗಿ ಸಿನಿಮಾ ಕಾರ್ಮಿಕರ ಸಂಘವಾಗಿರುವ (ಎಫ್​ಡಬ್ಲುಐಸಿಇ) ಪತ್ರ ಬರೆದು ಕಾರ್ತಿಕ್ ಆರ್ಯನ್​ಗೆ ಎಚ್ಚರಿಕೆ ನೀಡಿದೆ.
‘ಆಜಾದಿ ಉತ್ಸವ್: ದಿ ಇಂಡಿಯನ್ಸ್ ಇಂಡಿಪೆಂಡೆನ್ಸ್​ ಡೇ’ ಕಾರ್ಯಕ್ರಮವನ್ನು ಅಗಾಸ್ ರೆಸ್ಟೊರೆಂಟ್ ಆಂಡ್ ಕೇಟರಿಂಗ್ಸ್​ ಅವರು ಆಯೋಜನೆ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾರ್ತಿಕ್ ಆರ್ಯನ್ ಭಾಗವಹಿಸಲಿದ್ದಾರೆ. ಆದರೆ ಈ ಕಾರ್ಯಕ್ರಮ ಆಯೋಜಿಸಿರುವ ಅಗಾಸ್ ರೆಸ್ಟೊರೆಂಟ್ ಆಂಡ್ ಕೇಟರಿಂಗ್ಸ್ ಪಾಕಿಸ್ತಾನ ವ್ಯಕ್ತಿಯ ಮಾಲೀಕತ್ವ ಹೊಂದಿದ್ದು, ಇದೇ ರೆಸ್ಟೊರೆಂಟ್ ವತಿಯಿಂದ ‘ಜಶ್ನ್-ಎ-ಅಜಾದಿ’ ಹೆಸರಿನಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನೂ ಸಹ ಆಯೋಜಿಸಲಾಗಿದೆಯಂತೆ. ಪಾಕ್ ಸ್ವಾತಂತ್ರ್ಯೋತ್ಸವ ಆಚರಣೆಗೆ ಪಾಕಿಸ್ತಾನಿ ಜನಪ್ರಿಯ ಗಾಯಕ ಅತಿಫ್ ಅಸ್ಲಮ್ ಅನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!