ಉದಯವಾಹಿನಿ, ನವದೆಹಲಿ: ಸಹಮತದಿಂದ ಒಳಮೀಸಲಾತಿ ಹಂಚಿಕೆ ಮಾಡಿಕೊಳ್ಳಲು ದಲಿತ ಶಾಸಕರು, ಸಚಿವರು ಸಭೆ ನಡೆಸುವುದಾದರೆ ನ್ಯಾ.ನಾಗಮೋಹನ್ ದಾಸ್ ಸಮಿತಿ ರಚಿಸಿ ಸರ್ಕಾರದ ಬೊಕ್ಕಸದ 150 ಕೋಟಿ ರೂ. ವ್ಯರ್ಥ ಮಾಡಿದ್ಯಾಕೆ ಎಂದು ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ ಅವರು ಪ್ರಶ್ನಿಸಿದರು. ಒಳಮೀಸಲಾತಿ ಸಂಬಂಧ ದಲಿತ ನಾಯಕ ಸಭೆ ಬಗ್ಗೆ ಮಾತನಾಡಿದ ಅವರು, ಒಳಮೀಸಲಾತಿ ಹಂಚಿಕೊಳ್ಳಲು ಮಾತುಕತೆ ನಡೆಸಿರುವುದಾಗಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ಹಾಗಿದ್ದರೆ ನ್ಯಾ.ನಾಗಮೋಹನ್ ದಾಸ್ ಸಮಿತಿ ರಚಿಸಿದ್ಯಾಕೆ ಎಂದು ಕೇಳಿದರು.
ನ್ಯಾ.ಸದಾಶಿವ ಆಯೋಗದ ವರದಿಯಲ್ಲಿ ಅಂಕಿ ಅಂಶಗಳು ಸರಿಯಿಲ್ಲ ಬಿಜೆಪಿ ಸರ್ಕಾರ ಎಂದು ತಿರಸ್ಕಾರ ಮಾಡಿದೆ ಎಂದು ಹೇಳಿದ್ದಾರೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಸದಾಶಿವ ಆಯೋಗ ತಿರಸ್ಕಾರ ಮಾಡಲು 2011ರ ಜನಗಣತಿಯ ಅಂಕಿ ಸಂಖ್ಯೆ ಅದರಲ್ಲಿ ಇರಲಿಲ್ಲ. ಹೀಗಾಗಿ ಬಸವರಾಜ್ ಬೊಮ್ಮಾಯಿ ಸರ್ಕಾರದ ಮೇಲೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕು ಎನ್ನುವ ಒತ್ತಾಯ ಇತ್ತು. ಈ ಹಿನ್ನೆಲೆ 15% ಇರೋದು 17%, 3% ಇರೋದು 7% ಮಾಡಲಾಯಿತು. ಬಳಿಕ ಸಚಿವ ಮಾಧುಸ್ವಾಮಿ ಅವರ ವರದಿ ಸ್ವೀಕಾರ ಮಾಡಿ ಕೇಂದ್ರಕ್ಕೆ ಕಳುಹಿಸಲಾಯಿತು. ತಪ್ಪು ಮಾಹಿತಿ ಮೂಲಕ ಜನರಿಗೆ ದಾರಿ ತಪ್ಪಿಸುವ ಪ್ರಯತ್ನ ಎಸ್/ಎಟಿ ಮಂತ್ರಿಗಳು, ಶಾಸಕರು ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಡಾ.ಬಿ.ಆರ್ ಅಂಬೇಡ್ಕರ್ ಬರೆದ ಸಂವಿಧಾನ ರೀತಿಯಲ್ಲಿ ಆಡಳಿತ ಮಾಡುತ್ತಿಲ್ಲ, ಕಾಂಗ್ರೆಸ್ ಎಸ್/ಎಟಿ ಜನರನ್ನು ಕೇವಲ ಮತ ಬ್ಯಾಂಕ್ ಮಾಡಿಕೊಂಡಿದೆ. ಇದರಿಂದ ದೀನ ದಲಿತರ ಕಲ್ಯಾಣ ಆಗಲ್ಲ, ಸಿದ್ದರಾಮಯ್ಯರಿಗೆ ಕಳಕಳಿ, ಕಾಳಜಿ ಎರಡೂ ಇಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೂ ಕಾಳಜಿ ಇಲ್ಲ. ಎರಡು ವರ್ಷಗಳಲ್ಲಿ 38 ಸಾವಿರ ಕೋಟಿ ರೂ. ದಲಿತರ ಹಣವನ್ನು ಶಿಕ್ಷಣ, ಭೂಮಿ, ಉದ್ಯೋಗ, ವಸತಿ ನೀಡಲು ಬಳಸಲಿಲ್ಲ, ವೋಟ್ ಬ್ಯಾಂಕ್ ರಾಜಕಾರಣಕ್ಕೆ ದುರುಪಯೋಗ ಮಾಡಿಕೊಂಡಿದ್ದಾರೆ. ಸಫಾಯಿ ಕರ್ಮಚಾರಿ ಆಯೋಗ ಎಸ್‌ಸಿ, ಎಸ್‌ಟಿ ಆಯೋಗಗಳಿಗೆ ಅಧ್ಯಕ್ಷರ ನೇಮಕಾತಿ ಆಗಿಲ್ಲ ಎಂದು ಕುಟುಕಿದರು.
