ಉದಯವಾಹಿನಿ, ನವದೆಹಲಿ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಶಿಬು ಸೊರೇನ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ತೆರಳಿದ ಮೋದಿ, ಶಿಬು ಸೊರೇನ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಅಲ್ಲದೇ ಕುಟುಂಬಸ್ಥರನ್ನು ಭೇಟಿ ಮಾಡಿ ಸಂತಾಪ ಸೂಚಿಸಿದರು.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಮೋದಿ, ಶಿಬು ಸೊರೇನ್ ಅವರು ಸಾರ್ವಜನಿಕ ಜೀವನದ ಶ್ರೇಣಿಯಲ್ಲಿ ಏರಿದ ತಳಮಟ್ಟದ ನಾಯಕರಾಗಿದ್ದರು. ಬುಡಕಟ್ಟು ಸಮುದಾಯಗಳು, ಬಡವರು ಮತ್ತು ದೀನದಲಿತರನ್ನು ಸಬಲೀಕರಣಗೊಳಿಸುವ ಬಗ್ಗೆ ಅವರು ವಿಶೇಷವಾಗಿ ಉತ್ಸುಕರಾಗಿದ್ದರು. ಅಲ್ಲದೇ ತಮ್ಮ ಇಡೀ ಜೀವನವನ್ನು ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದರು. ಅದಕ್ಕಾಗಿ ಅವರನ್ನು ಯಾವಾಗಲೂ ಸ್ಮರಿಸಲಾಗುವುದು. ಅವರ ನಿಧನದಿಂದ ದುಃಖಿತನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ ಸ್ಥಾಪಕರಲ್ಲಿ ಒಬ್ಬರಾದ ಶಿಬು ಸೊರೇನ್ ಅವರು 81ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಮೂತ್ರಪಿಂಡ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಸೊರೇನ್ ಅವರನ್ನ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದರಿಂದ ಇತ್ತೀಚೆಗೆ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!