ಉದಯವಾಹಿನಿ, ವಾಷಿಂಗ್ಟನ್: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧಕ್ಕೆ ಭಾರತವು ಪರಿಣಾಮಕಾರಿಯಾಗಿ ಹಣಕಾಸು ಒದಗಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಕಟವರ್ತಿ ಟೀಕಿಸಿದ್ದಾರೆ. ಶ್ವೇತಭವನದ ಉಪ ಮುಖ್ಯಸ್ಥನೂ ಆಗಿರುವ ಸ್ಟೀಫನ್ ಮಿಲ್ಲರ್, ಭಾರತವು ರಷ್ಯಾದಿಂದ ಕಚ್ಚಾತೈಲ ಖರೀದಿಸುವ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾಕ್ಕೆ ಹಣಕಾಸು ನೆರವು ಒದಗಿಸುತ್ತಿದೆ. ರಷ್ಯಾದಿಂದ ತೈಲ ಖರೀದಿ ವಿಷಯದಲ್ಲಿ ಭಾರತವು ಚೀನಾದ ಜೊತೆಗೂ ಸಂಬಂಧ ಹೊಂದಿದೆ ಎಂಬುದು ಆಘಾತಕಾರಿ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಬೇಕು ಎಂದು ಟ್ರಂಪ್ ಸ್ಪಷ್ಟವಾಗಿ ಹೇಳಿದ್ದಾರೆ. ಆದ್ರೆ ಭಾರತ ತೈಲ ಖರೀದಿ ಮುಂದುವರಿಸಿದೆ, ಇದು ಸ್ವೀಕಾರಾರ್ಹವಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಟ್ರಂಪ್ ಅದೇ ರಾಗ ಅದೇ ಹಾಡು: ಈ ಬೆಳವಣಿಗೆ ನಡುವೆ ಟ್ರಂಪ್ ಮತ್ತೊಮ್ಮೆ ಭಾರತ-ಪಾಕ್ ಯುದ್ಧ ನಿಲ್ಲಿಸುದ್ದು ನಾನೇ ಎಂದು ಬೀಗಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಸೇನಾ ಸಂಘರ್ಷವನ್ನು ನಿಲ್ಲಿಸಿದ್ದು ನಾವೇ. ಸಂಘರ್ಷದ ವೇಳೆ ರಾತ್ರಿ ದೀರ್ಘಕಾಲ ವಾಷಿಂಗ್ಟನ್ ಮಧ್ಯಸ್ಥಿಕೆ ವಹಿಸಿ ನಡೆಸಿದ ಮಾತುಕತೆಯ ಫಲವಾಗಿ ಉಭಯ ದೇಶಗಳು ತಕ್ಷಣ ಮತ್ತು ಪೂರ್ಣಪ್ರಮಾಣದ ಕದನ ವಿರಾಮಕ್ಕೆ ಸಮ್ಮತಿ ಸೂಚಿಸಿದವು ಎಂದು ಟ್ರಂಪ್ ಹೇಳಿದ್ದಾರೆ.
