ಉದಯವಾಹಿನಿ,ಚಾಮರಾಜನಗರ: ಕಾಂಗ್ರೆಸ್ ಗ್ಯಾರಂಟಿಗಳಿಂದ ವಿ ಸೋಮಣ್ಣ ಸೋತಿಲ್ಲ. ಬದಲಾಗಿ ಪಕ್ಷದ ನಾಯಕರಿಂದಲೇ ಸೋಲು ಅನುಭವಿಸಿದರು ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಚಾಮರಾಜನಗರದ ಡಾ ಬಿಆರ್ ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಬಿಜೆಪಿಯ ಸೋಲಿನ ಪರಾಮರ್ಶೆ ಸಭೆಯಲ್ಲಿ ಬಿಜೆಪಿ ನಾಯಕರ ವಿರುದ್ಧವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಸಭೆಯ ಆರಂಭದಲ್ಲಿಯೇ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಸಚಿವ ವಿ ಸೋಮಣ್ಣ ಅನುಯಾಯಿಗಳು ಸಭೆಯಲ್ಲಿ ತಮಗೂ ಮಾತನಾಡಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು. ಚಾಮರಾಜನಗರದಲ್ಲಿ ಸತತ ಮೂರನೇ ಬಾರಿ ಬಿಜೆಪಿ ಸೋತಿದೆ.
ಮೊದಲ ಬಾರಿ ಸೋತಾಗಾಲೂ ಹೀಗೆ ಹೇಳಿದಿರಿ, ಎರಡನೇ ಬಾರಿ ಸೋತಾಗಲೂ ಪರಾಮರ್ಶೆ ಅಂತಾ ಹೇಳಿದ್ರಿ. ಈಗಲೂ ಅದನ್ನೇ ಮಾಡುತ್ತೀದ್ದೀರಿ? ಎಂದು ಕಾರ್ಯಕರ್ತರು ಕಿಡಿಕಾರಿದರು. ಕಾಂಗ್ರೆಸ್ ಗ್ಯಾರಂಟಿಗಳಿಂದ ಸೋಮಣ್ಣ ಸೋತಿಲ್ಲ, ಪಕ್ಷದ ನಾಯಕರಿಂದಲೇ ಅವರು ಚಾಮರಾಜನಗರದಲ್ಲಿ ಸೋತದ್ದು ಎಂದು ಬೇಸರ ಹೊರಹಾಕಿದರು. ಈ ವೇಳೆ ಮಾಜಿ ಸಿಎಂ ಡಿವಿ ಸದಾನಂದಗೌಡ ನಾನು ಕೋರ್ ಕಮಿಟಿಯಲ್ಲಿದ್ದೇನೆ, ನಿಮ್ಮ ಅಭಿಪ್ರಾಯಗಳನ್ನು ನಾಯಕರಿಗೆ ಮುಟ್ಟಿಸುತ್ತೇನೆ, ಮುಂದೆ ಈ ರೀತಿ ಆಗಬಾರದು ಎಂದು ಒತ್ತಾಯಿಸುತ್ತೇನೆ ಎಂದು ಭರವಸೆಯನ್ನು ನೀಡಿದರು. ಸೋಲಿನ ಪರಾಮರ್ಷೆ ಸಭೆಗೆ ಪರಾಜಿತ ಅಭ್ಯರ್ಥಿ ಹಾಗೂ ಮಾಜಿ ಸಚಿವ ವಿ ಸೋಮಣ್ಣ ಗೈರಾಗಿದ್ದರು.
