
ಉದಯವಾಹಿನಿ, ಚೆನ್ನೈ(ತಮಿಳುನಾಡು): ನಟ ಹಾಗು ರಾಜ್ಯಸಭಾ ಸಂಸದ ಕಮಲ್ ಹಾಸನ್ ಅವರು ಧಾರ್ಮಿಕ ಭಾವನೆಯ ಆಧಾರದ ಮೇಲೆ ಜನರನ್ನು ವಿಭಜಿಸುತ್ತಿದ್ದಾರೆ ಎಂದು ತಮಿಳುನಾಡಿನ ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ ಕಿಡಿಕಾರಿದ್ದಾರೆ.ಸನಾತನ ಧರ್ಮದ ಕುರಿತು ಕಮಲ್ ಹಾಸನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಂಥ ಹೇಳಿಕೆಗಳು ಜನರ ಭಾವನೆಗಳನ್ನು ಘಾಸಿಗೊಳಿಸುತ್ತದೆ ಎಂದರು.ಕಮಲ್ ಹಾಸನ್ ತಮ್ಮ ಕಾರ್ಯಕರ್ತರಿಗಿಂತ ಡಿಎಂಕೆಗೆ ಹೆಚ್ಚು ಕೃತಜ್ಞರಾಗಿದ್ದಾರೆ. ಅವರು ಭಾಷೆ ವಿಚಾರವಾಗಿ ರಾಜ್ಯ-ರಾಜ್ಯಗಳ ಜನರನ್ನು ವಿಭಜಿಸಿದ್ದಾರೆ. ಇದೀಗ ಧಾರ್ಮಿಕ ವಿಚಾರವನ್ನು ಎತ್ತಿ ಜನರನ್ನು ಧಾರ್ಮಿಕ ಭಾವನೆಯ ಆಧಾರದ ಮೇಲೆ ವಿಭಜಿಸುತ್ತಿದ್ದಾರೆ ಎಂದು ಟೀಕಿಸಿದರು.
ನೀವು ಯಾಕೆ ಸನಾತನ ಧರ್ಮದ ಕುರಿತು ಮಾತನಾಡುತ್ತಿದ್ದೀರಿ ಎಂದು ನಾನು ಕೇಳುತ್ತೇನೆ. ಅವರು ಸನಾತನದ ಕುರಿತು ಮಾತನಾಡಿದರೆ, ಉದಯನಿಧಿ ಮತ್ತು ಸ್ಟಾಲಿನ್ಗೆ ಖುಷಿಯಾಗುತ್ತದೆ. ಆದರೆ ತಮಿಳುನಾಡು ಜನರಿಗೆ ಬೇಸರವಾಗದೇ ಇರದು. ಕೇವಲ ತಮಿಳುನಾಡು ಮಾತ್ರವಲ್ಲ, ಈ ತತ್ವವನ್ನು ಅನುಸರಿಸುವ ಎಲ್ಲ ಭಾರತೀಯರಿಗೂ ಘಾಸಿಯಾಗುತ್ತದೆ. ಅವರ ಹೇಳಿಕೆಯನ್ನು ನಾನು ಗಂಭೀರವಾಗಿ ಖಂಡಿಸುತ್ತೇನೆ ಎಂದರು.
ಕಮಲ್ ಹಾಸನ್ ಹೇಳಿದ್ದೇನು?: ಮಕ್ಕಳ್ ನಿಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಕಾರ್ಯಕ್ರಮವೊಂದರಲ್ಲಿ, ಶಿಕ್ಷಣದ ಪ್ರಾಮುಖ್ಯತೆ ಕುರಿತು ಹೇಳುವಾಗ ಸರ್ವಾಧಿಕಾರ ಮತ್ತು ಸನಾತನದ ಸರಪಳಿಗಳನ್ನು ಮುರಿಯುವ ಏಕೈಕ ಅಸ್ತ್ರ ಶಿಕ್ಷಣ ಎಂಬ ಹೇಳಿಕೆ ನೀಡಿದ್ದರು. ಅಗರಂ ಫೌಂಡೇಷನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಕೈಯಲ್ಲಿ ಶಿಕ್ಷಣದ ಹೊರತಾಗಿ ಯಾವುದನ್ನೂ ತೆಗೆದುಕೊಳ್ಳಬೇಡಿ. ಶಿಕ್ಷಣವಿಲ್ಲದೆ ನಮಗೆ ಗೆಲುವಿಲ್ಲ. ಮೂರ್ಖರು ನಿಮ್ಮನ್ನು ಮೂರ್ಖರನ್ನಾಗಿ ಮಾಡಬಹುದು. ಶಿಕ್ಷಣ ಮಾತ್ರ ಅದನ್ನು ಸೋಲಿಸಲು ಸಾಧ್ಯ. ಅದಕ್ಕೆ ನಾವು ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಬೇಕು ಎಂದಿದ್ದರು.
