ಉದಯವಾಹಿನಿ,ಶಿವಮೊಗ್ಗ: ವಿದ್ಯುತ್ ದರ ಏರಿಕೆ ಖಂಡಿಸಿ, ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ) ಮತ್ತು ಮೆಸ್ಕಾಂ ವಿರುದ್ಧ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯರು ಇಲ್ಲಿನ ಬೈಪಾಸ್ ರಸ್ತೆ, ಎಂಆರ್ ಎಸ್ ವೃತ್ತದ ಮೆಸ್ಕಾಂ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಕಚೇರಿಗೆ ಮನವಿ ಸಲ್ಲಿಸಿದರು. ಕೈಗಾರಿಕಾ ಕ್ರಾಂತಿ ಮೂಲಕ ದೇಶದ ಅಭಿವೃದ್ಧಿ ಕನಸು ಕಾಣುತ್ತಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಂಸ್ಥೆಗಳ ಅಳಿವು- ಉಳಿವಿನ ಪ್ರಶ್ನೆ ಉದ್ಬವಿಸಿದೆ.
ಮೆಸ್ಕಾಂನ ವಿದ್ಯುತ್ ಬಿಲ್ ನಲ್ಲಿ ಅವೈಜ್ಞಾನಿಕ ಪದ್ಧತಿ ಅಳವಡಿಸಿ, ಶೇ50 ರಿಂದ 70 ರಷ್ಟು ಹೆಚ್ಚುವರಿ ವಿದ್ಯುತ್ ಬಿಲ್ ಬರಿಸುವ ಸಂಕಷ್ಟದ ಪರಿಸ್ಥಿತಿ ಕೈಗಾರಿಕಾ ಸದಸ್ಯರಲ್ಲಿ ಭಯವನ್ನು ಉಂಟುಮಾಡಿದೆ ಎಂದು ಆತಂಕ ವ್ಯಕ್ತ ಪಡಿಸಿದರು. ಹೊಸ ವಿದ್ಯುತ್ ಬಿಲ್ ದರ ಕೈಗಾರಿಕೆಗಳು ಹಾಗೂ ಉದ್ಯಮಗಳಿಗೆ ಮಾರಕವಾಗಿದ್ದು, ವ್ಯವಹಾರ ವೈವಾಟಿಗೆ ಮಾರಕ ದುಸ್ಥಿತಿ ತಂದೊಡ್ಡಿದೆ. ಈ ಪದ್ಧತಿ ಇದೇ ರೀತಿ ಮುಂದುವರೆದರೆ ಕೈಗಾರಿಕೆಗಳು ಬಾಗಿಲು ಮುಚ್ಚಿ, ಕೈಸುಟ್ಟುಕೊಳ್ಳುವ ಸ್ಥಿತಿ ಎದುರಾಗಲಿದೆ ಎಂದು ಮನವಿಯಲ್ಲಿ ದೂರಿದರು.
