ಉದಯವಾಹಿನಿ, ರಾಯಚೂರು: ಜಿಲ್ಲೆಯಲ್ಲಿ ಪ್ರಯಾಣಿಕರಿಗೆ ಸಾರಿಗೆ ನೌಕರರ ಮುಷ್ಕರ ಎಫೆಕ್ಟ್ ತಟ್ಟಿದ್ದು, ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದಲೇ ನೌಕರರ ಮುಷ್ಕರ ಆರಂಭವಾಗಿದ್ದು, ಬಸ್ ಸಂಚಾರ ಅತ್ಯಂತ ವಿರಳವಾಗಿದೆ. ಹೀಗಾಗಿ ದೂರದ ಊರುಗಳಿಂದ ಬಂದ ಪ್ರಯಾಣಿಕರು ಗ್ರಾಮೀಣ ಭಾಗಗಳಿಗೆ ಬಸ್ ಇಲ್ಲದೇ ಪರದಾಡುತ್ತಿದ್ದಾರೆ.
ರಾಯಚೂರು ವಿಭಾಗದ ಒಟ್ಟು 600 ಬಸ್‌ಗಳಲ್ಲಿ ಕಡಿಮೆ ಪ್ರಮಾಣದ ಬಸ್‌ಗಳು ಓಡಾಟ ನಡೆಸಿವೆ. ಸಾರಿಗೆ ನೌಕರರು ಬಸ್ ಹತ್ತದೇ ಬಸ್ ನಿಲ್ದಾಣದಲ್ಲೇ ಉಳಿದಿದ್ದಾರೆ. ನಮ್ಮ ಕಷ್ಟಗಳಿಗೆ ಸರ್ಕಾರ ಸ್ಪಂದಿಸಿದ್ರೆ ನಾವ್ಯಾಕೆ ಮುಷ್ಕರ ಮಾಡ್ತಿದ್ವಿ? ನಮ್ಮ ಕಷ್ಟ ಕೇಳುವವರು ಯಾರು ಅಂತ ಅಳಲು ತೋಡಿಕೊಂಡಿದ್ದಾರೆ. ಅಧಿಕಾರಿಗಳ ಒತ್ತಡಕ್ಕೆ ಪ್ರಯಾಣ ಬೆಳೆಸಿದ್ರೆ ಮುಂದಾಗುವ ಅನಾಹುತಗಳಿಗೆ ಜವಾಬ್ದಾರಿ ಯಾರು ವಹಿಸುತ್ತಾರೆ? ಬಸ್‌ಗಳಿಗೆ ಕಲ್ಲು ತೂರಾಟ ಬೆಂಕಿ ಹಚ್ಚಿದ್ರೆ ನಾವೇನು ಮಾಡೋದು? ಅಂತ ನೌಕರರು ಪ್ರಶ್ನಿಸಿದ್ದಾರೆ.
ಇನ್ನೂ ಗಡಿಜಿಲ್ಲೆ ರಾಯಚೂರಿನಲ್ಲಿ ಆಂಧ್ರ ಪ್ರದೇಶ, ತೆಲಂಗಾಣದ ಸುಮಾರು 40 ಸಾರಿಗೆ ಬಸ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಂತರರಾಜ್ಯ ಬಸ್ ಓಡಾಟಕ್ಕೆ ಪಕ್ಕದ ರಾಜ್ಯಗಳಿಂದ ಹೆಚ್ಚುವರಿ ಬಸ್‌ಗಳ ಓಡಾಟಕ್ಕಾಗಿ ರಾಯಚೂರು ಜಿಲ್ಲಾಡಳಿತ ಮನವಿ ಹಿನ್ನೆಲೆ ಹೆಚ್ಚುವರಿ ಬಸ್‌ಗಳು ಓಡಾಟ ಆರಂಭಿಸಿವೆ. ಹೈದರಾಬಾದ್, ಮೆಹಬೂಬ್ ನಗರ, ಕರ್ನೂಲ್ ಮಾರ್ಗದಲ್ಲಿ ಬಸ್‌ಗಳು ಸಂಚಾರ ಮಾಡುತ್ತಿವೆ.
