ಉದಯವಾಹಿನಿ, ಬೆಂಗಳೂರು: ಎಸ್‌ಜೆಪಿ ಕಾಲೇಜು ಮಹಿಳಾ ಹಾಸ್ಟೆಲ್‌ಗೆ ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ದಿಢೀರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಕೆ.ಆರ್ ಸರ್ಕಲ್‌ನಲ್ಲಿರೋ ಎಸ್‌ಜೆಪಿ ಮಹಿಳಾ ಹಾಸ್ಟೆಲ್‌ಗೆ ಭೇಟಿ ನೀಡಿದ ಸಚಿವರು, ಅಡುಗೆ ಮನೆ, ರೂಂ, ವಾಶ್ ರೂಂ ಪರಿಶೀಲನೆ ನಡೆಸಿದರು.ಮಲಗುವ ಕೋಣೆ, ಅಡುಗೆ ಮನೆ, ವಾಶ್ ರೂಂ, ಬಾತ್ ರೂಂ ಪರಿಶೀಲನೆ ಮಾಡಿದ ಸಚಿವರು, ವಿದ್ಯಾರ್ಥಿಗಳು ಜಾಸ್ತಿ ಇದ್ದು, ವಾಶ್ ರೂಂ ಕಡಿಮೆ ಇರೋದಕ್ಕೆ ಅಸಮಾಧಾನ ಹೊರಹಾಕಿದರು. ವಾಶ್ ರೂಂ ಹೊಸದಾಗಿ ಮಾಡಿದ್ರು ಸರಿಯಾಗಿ ಮಾಡದ್ದಕ್ಕೆ ಸಚಿವರು ಸಿಟ್ಟಾದರು. ಯಾರು ಕೆಲಸ ಮಾಡಿದ್ದು? ಹೀಗೆ ಮಾಡಿದ್ರೆ ಹೇಗೆ ಅಂತ ಅಧಿಕಾರಿಗಳ ವಿರುದ್ದ ಸಚಿವರು ಗರಂ ಆದರು. ಯಾರು ಎಂಜಿನಿಯರ್? ಹೇಗೆ ಕೆಲಸ ಮಾಡೋದು? ದುಡ್ಡು ಕೊಟ್ಟರೂ ಸರಿಯಾಗಿ ಕೆಲಸ ಮಾಡಿಲ್ಲ ಅಂದರೆ ಹೇಗೆ ಎಂದು ಲೋಕೋಪಯೋಗಿ ಇಲಾಖೆ ವಿರುದ್ಧ ಕಿಡಿಕಾರಿದರು.
ಇದೇ ವೇಳೆ ಸಚಿವರ ಮುಂದೆ ಹಾಸ್ಟೆಲ್ ವಿದ್ಯಾರ್ಥಿನಿಯರು ಸಮಸ್ಯೆ ಹೇಳಿಕೊಂಡರು. ಸರ್ ನಮಗೆ ಬಿಸಿನೀರು ಸಮಸ್ಯೆ ಇದೆ. ವಾಶ್ ರೂಂ ಸರಿಯಿಲ್ಲ. ಒಂದು ರೂಂನಲ್ಲಿ 6 ಜನ ಇದ್ದೇವೆ. ಹಾಸ್ಟೆಲ್‌ನಲ್ಲಿ ಕ್ಲೀನ್ ಸರಿಯಾಗಿ ಇಲ್ಲ. ಹಾಸ್ಟೆಲ್‌ನಲ್ಲಿ ಪವರ್ ಸಮಸ್ಯೆ ಇದೆ. ಸ್ನಾನ ಮಾಡೋಕೆ ಬಿಸಿನೀರು ಇಲ್ಲ. ಊಟದ ಸಮಸ್ಯೆ ಸ್ವಲ್ಪ ಇದೆ. ನಾನ್ ವೆಜ್ ಕೊಡುತ್ತಿಲ್ಲ. ಒಂದೊಂದು ದಿನ ಊಟ ಸರಿ ಇರಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದರು.
