ಉದಯವಾಹಿನಿ,ಬೆಂಗಳೂರು: ದ್ವಿತೀಯ ಕೃಷಿಯ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ ಎಂದು ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅವರು ತಿಳಿಸಿದರು. ಇಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ನವದೆಹಲಿಯ ಭಾರತೀಯ ವಿಸ್ತರಣಾ ಶಿಕ್ಷಣ ಸಂಸ್ಥೆ, ಭಾರತೀಯ ವಿಸ್ತರಣಾ ಶಿಕ್ಷಣ ಸಂಸ್ಥೆ (ಕರ್ನಾಟಕ ಅಧ್ಯಾಯ), ರವರ ಸಂಯುಕ್ತಾಶ್ರಯದಲ್ಲಿ ಜಿಕೆವಿಕೆ ಆವರಣದಲ್ಲಿರುವ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಮಾವೇಶ ಭವನದಲ್ಲಿ ಹಮ್ಮಿಕೊಳ್ಳಲಾದ ‘ಭಾರತೀಯ ವಿಸ್ತರಣಾ ಶಿಕ್ಷಣ ಸಂಸ್ಥೆ, ರಾಷ್ಟ್ರೀಯ ಸಮ್ಮೇಳನ 2023’ ಅನ್ನು ಕೃಷಿ ಮತ್ತು ರೈತ ಕಲ್ಯಾಣ ಸಚಿವೆಯಾದ ಶೋಭಾ ಕರಂದ್ಲಾಜೆ ಅವರು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದಾರೆ.
ಸಣ್ಣ ರೈತರು ಜಾಗತಿಕ ಮಾರುಕಟ್ಟೆಯನ್ನು ತಲುಪಲು ಮಾರುಕಟ್ಟೆ, ಸಾರಿಗೆ, ಮೂಲಭೂತ ಸೌಕರ್ಯ, ಶಿಥಲೀಕರಣಕ್ಕೆ ಸಂಬಂಧಿಸಿದಂತೆ ಸವಾಲನ್ನು ಎದುರಿಸಬೇಕಾಗುತ್ತದೆ. ಕೃಷಿಗೆ ಸಂಬಂಧಿಸಿದಂತೆ ನೀತಿ ನಿರೂಪಣೆಯಲ್ಲಿ ಲೋಪವಿದೆ. ಲೋಪವನ್ನು ಸರಿಪಡಿಸಲು ಸರ್ಕಾರ, ವಿಶ್ವವಿದ್ಯಾಲಯ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಒಟ್ಟಿಗೆ ಚರ್ಚಿಸಬೇಕು. ರಾಜ್ಯ ಸರ್ಕಾರದ ಸಭೆಗಳಲ್ಲಿ ಕೃಷಿ ನೀತಿ ನಿರೂಪಣೆಯಲ್ಲಿನ ಲೋಪಗಳ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು. ಈ ರಾಷ್ಡ್ರೀಯ ಸಮ್ಮೇಳನವು ವಿಜ್ಞಾನಿಗಳಿಗೆ ಮತ್ತು ಕ್ಷೇತ್ರ ವಿಸ್ತರಣಾಧಿಕಾರಿಗಳಿಗೆ ದ್ವಿತೀಯ ಕೃಷಿ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ ಉಪಕ್ರಮಗಳ ಕುರಿತು ಚರ್ಚಿಸಲು ಉತ್ತಮ ವೇದಿಕೆಯಾಗಿದೆ ಎಂದರು.
