ಉದಯವಾಹಿನಿ, ಬೆಂಗಳೂರು: ʼ‘ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ ಆಯೋಗವನ್ನು ನೇಮಕ ಮಾಡಿದ್ದು, ವರದಿ ಸಲ್ಲಿಕೆಯಾಗಿದೆ. ಕಡಿಮೆ ಸಮಯದಲ್ಲಿ ವೈಜ್ಞಾನಿಕ ಅಧ್ಯಯನ ಮಾಡುವ ಮೂಲಕ ಶೇ. 95ರಷ್ಟು ಸಮುದಾಯದ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಿ ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು ಎಲ್ಲ ಸಚಿವರಿಗೆ ನೀಡಲಾಗಿದೆ. ಸಚಿವ ಸಂಪುಟ ವರದಿಯನ್ನು ಸ್ವೀಕರಿಸಿದೆ. ಈ ಬಗ್ಗೆ ಅಧ್ಯಯನ ಮಾಡಿ, ಆಗಸ್ಟ್ 16ರಂದು ಶನಿವಾರ ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆದು ಚರ್ಚಿಸಿ ನಿರ್ಣಯವನ್ನು ಕೈಗೊಳ್ಳಲಾಗುವುದುʼʼ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಿರ್ಣಯಗಳಿಗೆ ಸಂಬಂಧಿಸಿದಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
2021-22ನೇ ಸಾಲಿನ ಟ್ರಾಂಚ್-27ರಡಿ ನಬಾರ್ಡ್‌ನಿಂದ ಅನುಮೋದನೆಗೊಂಡು ನಿರ್ಮಿಸುತ್ತಿರುವ ಕೃಷಿ ಇಲಾಖೆಯ 13 ಶೀತಲ ಘಟಕಗಳ ನಿರ್ಮಾಣ ಕಾಮಗಾರಿಗಳ 171.91 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಹಾಗೂ ಹೆಚ್ಚುವರಿ ಮೊತ್ತ 47.81 ಕೋಟಿ ರೂ. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕದಿಂದ ಭರಿಸಲು ಸಚಿವ ಸಂಪುಟ ನಿರ್ಧರಿಸಿದೆ.
ಕಿತ್ತೂರಿಗೆ 100 ಹಾಸಿಗೆ ಆಸ್ಪತ್ರೆ
ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ 100 ಹಾಸಿಗೆಗಳ ತಾಲೂಕು ಮಟ್ಟದ ಆಸ್ಪತ್ರೆಯನ್ನು 3,378.65 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲು ಹೊಸದಾಗಿ ಟೆಂಡರ್ ಆಹ್ವಾನಿಸಿ ಅಂದಾಜು ಪಟ್ಟಿ ತಯಾರಿಸಲು ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟ ನೀಡಿತು.
ಮೊಳಕಾಲ್ಮೂರು ಆಸ್ಪತ್ರೆ ಮೇಲ್ದರ್ಜೆಗೆ
ಗಣಿ ಬಾಧಿತ ಮೊಳಕಾಲ್ಮೂರು ತಾಲೂಕಿನಲ್ಲಿ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಪ್ರಸ್ತುತವಿರುವ 100 ಹಾಸಿಗೆ ತಾಲೂಕು ಆಸ್ಪತ್ರೆಯನ್ನು 200 ಹಾಸಿಗೆಗಳಿಗೆ ಉನ್ನತೀಕರಿಸಿ ಪ್ರತ್ಯೇಕ ಜಿಲ್ಲಾಮಟ್ಟದ ಆಸ್ಪತ್ರೆಯನ್ನು ಸ್ಥಾಪಿಸಲು ಸಚಿವ ಸಂಪುಟ ಅನುಮೋದಿಸಿದೆ.
ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಸೌಲಭ್ಯ
ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ನಿಬಂಧನೆ ಮತ್ತು ಷರತ್ತುಗಳು) (ಕಾಲೇಜು ಶಿಕ್ಷಣ) (ತಿದ್ದುಪಡಿ) ನಿಯಮಗಳಿಗೆ ತಿದ್ದುಪಡಿ ಮೂಲಕ ಮುಸ್ಲಿಂಯೇತರ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಸಂಖ್ಯೆ ಶೇ. 50ರಷ್ಟು ಕಡ್ಡಾಯವಾಗಿ ಹೊಂದಿರಬೇಕೆಂಬ ನಿಯಮವನ್ನು ತೆಗೆದುಹಾಕಲು ಸಚಿವ ಸಂಪುಟ ನಿರ್ಣಯಿಸಿದೆ.
