ಉದಯವಾಹಿನಿ, ಬೆಂಗಳೂರು: ಸಿನಿಮಾ ಮಾಡುವುದಾಗಿ 3.15 ಕೋಟಿ ರೂ. ಹಣ ಪಡೆದು ವಂಚನೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ನಟ ಧ್ರುವ ಸರ್ಜಾ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ. ಪರಭಾಷೆಯಲ್ಲಿ ಸಿನಿಮಾ ಮಾಡಲ್ಲ ಅಂದಿದ್ದಕ್ಕೆ ನೋಟಿಸ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಘವೇಂದ್ರ ಹೆಗ್ಡೆ ಜೂನ್ 8ರಂದು ಬಂದು ನಮ್ಮನ್ನು ಮೀಟ್ ಮಾಡಿ ಮಾತಾಡಿ ಹೋಗಿದ್ದರು. ಇದು ಸೈನಿಕರ ಕುರಿತಾದ ಸಿನಿಮಾ ಆದ್ದರಿಂದ ಬಜೆಟ್ ಜಾಸ್ತಿ ಆಗುತ್ತದೆ. ಕನ್ನಡದಲ್ಲಿ ಸಿನಿಮಾ ಮಾಡೋದು ಬೇಡ. ಕನ್ನಡದಲ್ಲಿ ಸರಿಯಾಗಿ ಬ್ಯುಸಿನೆಸ್ ಆಗಲ್ಲ. ತಮಿಳು ಅಥವಾ ತೆಲುಗಿನಲ್ಲಿ ಸಿನಿಮಾ ಮಾಡೋಣ ಅಂತಾ ಹೇಳಿದ್ದರು. ಇಲ್ಲ ಕನ್ನಡದಲ್ಲೇ ಮೊದಲು ಮಾಡೋಣ. ಕನ್ನಡಕ್ಕೆ ಆದ್ಯತೆ ಕೊಡಿ ಅಂತ ಧ್ರುವ ಸರ್ಜಾ ಅವ್ರು ಹೇಳಿದ್ದರು. ಇದಕ್ಕೆ ಒಪ್ಪದ್ದ ರಾಘವೇಂದ್ರ ಅವರು ಜೂನ್ 10ಕ್ಕೆ ಮುಂಬೈ ಕೋರ್ಟ್ನಿಂದ ನೋಟಿಸ್ ಕಳುಹಿಸಿದ್ದಾರೆ. ಜೂನ್ 15ಕ್ಕೆ ನೋಟಿಸ್‌ಗೆ ನಾವು ಉತ್ತರವನ್ನ ಕೊಟ್ಟಿದ್ದೇವೆ. ನಮ್ಮ ಕಡೆಯ ಲಾಯರ್ ಕೂಡ ಈಗ ಮಾತುಕತೆಯಲ್ಲಿ ಇದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೊದಲಿಗೆ ರಾಘವೇಂದ್ರ ಹೆಗ್ಡೆ ಅವರು 2018ರಲ್ಲಿ ನಮ್ಮನ್ನ ಭೇಟಿ ಮಾಡಿ, ಅಡ್ವಾನ್ಸ್ ಕೊಟ್ಟಿದ್ದರು. ನಾವು ಅವರಿಗೆ ಸಿಗಲಿಲ್ಲ ಎಂಬುದು ತಪ್ಪು ಮಾಹಿತಿ. 2018ರಲ್ಲಿ ಭೇಟಿಯಾದಾಗ ಸೈನಿಕರ ಕುರಿತಾದ ಸಿನಿಮಾ ಮಾಡಬೇಕೆಂದು ಹೇಳಿದ್ದರು. ಇದಕ್ಕೆ 3 ಕೋಟಿ 15 ಲಕ್ಷ ರೂ. ಅಡ್ವಾನ್ಸ್ ಕೊಟ್ಟಿದ್ದರು ಎಂದು ಮಾಹಿತಿ ನೀಡಿದ್ದಾರೆ.
