ಉದಯವಾಹಿನಿ, ನವದೆಹಲಿ: ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ ಬ್ರೇಕ್ ಹಾಕಲು ದೆಹಲಿ ಸರ್ಕಾರ ಮುಂದಾಗಿದೆ. ಶಾಲಾ ಶಿಕ್ಷಣ ಮಸೂದೆ 2025ನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದ್ದು, ಶುಲ್ಕ ಹೆಚ್ಚಳಕ್ಕೆ ಸರ್ಕಾರದ ಒಪ್ಪಿಗೆ ಕಡ್ಡಾಯವಾಗಿದೆ. ನಾಲ್ಕು ಗಂಟೆಗಳ ಚರ್ಚೆಯ ಬಳಿಕ ಮಸೂದೆಯನ್ನು ಅಂಗೀಕರಿಸಲಾಗಿದೆ. ಈ ವೇಳೆ ಎಎಪಿಯಿಂದ ಬಂದ ಎಂಟು ತಿದ್ದುಪಡಿಗಳ ಸಲಹೆಯನ್ನು ತಿರಸ್ಕರಿಸಲಾಗಿದೆ. ಈ ಮಸೂದೆಯಿಂದ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ ಕಡಿವಾಣ ಬೀಳಲಿದೆ. ಇದು ಪೋಷಕರಿಗೆ ಹೊರೆಯನ್ನು ಕಡಿಮೆ ಮಾಡಲಿದೆ. ಇನ್ನುಮುಂದೆ ಸರ್ಕಾರದ ಅನುಮತಿಯಿಲ್ಲದೇ ಯಾವುದೇ ಶಾಲೆ ಶುಲ್ಕವನ್ನು ಹೆಚ್ಚಿಸಲು ಸಾಧ್ಯವಾಗುವುದಿಲ್ಲ ಎಂದು ಶಿಕ್ಷಣ ಸಚಿವ ಆಶಿಶ್ ಸೂದ್ ಹೇಳಿದ್ದಾರೆ.
ಈ ಹಿಂದೆ ಸರ್ಕಾರದಿಂದ ಹಂಚಿಕೆಯಾದ ಭೂಮಿಯಲ್ಲಿ ನಿರ್ಮಾಣಗೊಂಡ ಸುಮಾರು 350 ಶಾಲೆಗಳು ಮಾತ್ರ ಶುಲ್ಕ ಪರಿಷ್ಕರಣೆಗೆ ಸರ್ಕಾರದ ಅನುಮತಿ ಪಡೆಯಬೇಕಾಗಿತ್ತು. ಈಗ ನಗರದ ಎಲ್ಲಾ 1,443 ಖಾಸಗಿ ಅನುದಾನರಹಿತ ಶಾಲೆಗಳಿಗೂ ಈ ನಿಯಮಗಳು ಅನ್ವಯವಾಗುತ್ತದೆ. ಆ ಶಾಲೆ ಸರ್ಕಾರಿ ಭೂಮಿಯಲ್ಲಿರಲಿ ಅಥವಾ ಇಲ್ಲದಿರಲಿ ಅದು ಈ ನಿಯಮಕ್ಕೆ ಒಳಪಡುತ್ತದೆ ಎಂದು ಅವರು ತಿಳಿಸಿದ್ದಾರೆ.
4 ಗಂಟೆಗಳ ಕಾಲ ನಡೆದ ತೀವ್ರ ಚರ್ಚೆ
ದೆಹಲಿ ವಿಧಾನಸಭೆಯಲ್ಲಿ ಮಸೂದೆಯ ಮೇಲೆ ಸುಮಾರು ನಾಲ್ಕು ಗಂಟೆಗಳ ಕಾಲ ಚರ್ಚೆ ನಡೆಯಿತು. ಈ ವೇಳೆ, ಸಿಎಂ ರೇಖಾ ಗುಪ್ತಾ (CM Rekha Gupta ) ಅವರು, ದೆಹಲಿಯಲ್ಲಿ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳದ ನಿಯಂತ್ರಣಕ್ಕಾಗಿ ಜನರ 52 ವರ್ಷಗಳ ಕಾಯುವಿಕೆ ಕೊನೆಗೊಂಡಿದೆ ಎಂದರು. ಆದರೆ ಎಎಪಿ, ಕೆಲವು ಖಾಸಗಿ ಶಾಲೆಗಳು ಅನುಕೂಲಕರವಾಗಿದೆ. ಈ ನಿಯಮದಿಂದ ಹಿಂದೆ ನ್ಯಾಯಾಲಯ ನೀಡಿದ್ದ ಆದೇಶವನ್ನು ಗಾಳಿಗೆ ತೂರಿದಂತಾಗುತ್ತದೆ ಎಂದು ಆರೋಪಿಸಿತು.
