ಉದಯವಾಹಿನಿ,ಹೊಸದಿಲ್ಲಿ: ವೆಸ್ಟ್ ಇಂಡೀಸ್ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ 16 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಸ್ಥಾನ ಕಳೆದುಕೊಂಡಿದ್ದಾರೆ. ಆದರೆ, ಕಳೆದ ಕೆಲ ವರ್ಷಗಳಿಂದ ದೇಶಿ ಕ್ರಿಕೆಟ್‌ನಲ್ಲಿ ರನ್ ಹೊಳೆ ಹರಿಸಿದ್ದ ಪಾನಿ ಪೂರಿ ಹುಡುಗ ಯಶಸ್ವಿ ಜೈಸ್ವಾಲ್‌ಗೆ ಭಾರತ ದೀರ್ಘಾವಧಿ ತಂಡದಲ್ಲಿ ಅವಕಾಶ ನೀಡಲಾಗಿದೆ. ಮತ್ತೊಂದೆಡೆ ಯುವ ವೇಗಿ ಆಕಾಶ್ ದೀಪ್ ಅವರಿಗೂ ಟೆಸ್ಟ್ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪೈನಲ್‌ನಲ್ಲಿ ಅರ್ಧಶತಕ ಸೇರಿದಂತೆ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಅಜಿಂಕ್ಯ ರಹಾನೆ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅಲ್ಲದೆ, ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಉಪ ನಾಯಕನ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ರಣಜಿ ಟ್ರೋಫಿ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ರನ್ ಹೊಳೆ ಹರಿಸಿರುವ ಐಪಿಎಲ್ ಹೀರೋ ಯಶಸ್ವಿ ಜೈಸ್ವಾಲ್, ಇತ್ತೀಚೆಗೆ ಮುಕ್ತಾಯವಾಗಿದ್ದ 2023ರ ಐಪಿಎಲ್ ಟೂರ್ನಿಯಲ್ಲಿಯೂ ರಾಜಸ್ಥಾನ್ ರಾಯಲ್ಸ್ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಭಾರತ ತಂಡದಲ್ಲಿ ಚೇತೇಶ್ವರ್ ಪೂಜಾರ ಅವರ ಸ್ಥಾನಕ್ಕೆ ಜೈಸ್ವಾಲ್ ಅವರನ್ನು ಆಯ್ಕೆ ಮಾಡಲಾಗಿದೆ. ಆ ಮೂಲಕ 21ರ ಪ್ರಾಯದ ಆಟಗಾರನಿಗೆ ದೀರ್ಘಾವಧಿ ಅವಕಾಶ ನೀಡಲು ಬಿಸಿಸಿಐ ತೀರ್ಮಾನಿಸಿದೆ.
