ಉದಯವಾಹಿನಿ,ಹಾಸನ : ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ನೀಡಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಅಕ್ಕಿಯನ್ನು ಕೊಟ್ಟೆ ಕೊಡುತ್ತೇವೆ, ಎರಡು ಕೆಜಿ ಜೋಳ ಎಲ್ಲ ಸೇರಿಸಿ ಹತ್ತು ಕೆಜಿ ಧಾನ್ಯಗಳನ್ನು ಕೊಟ್ಟೇ ಕೊಡುತ್ತೇವೆ ಎಂದು ಸಹಕಾರ ಹಾಗೂ ಹಾಸನ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ. ಹಾಸನದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಅಕ್ಕಿ ತರುವ ಬಗ್ಗೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಒಂದು ದಿನ ಅಕ್ಕಿ ಕೊಡುತ್ತೇವೆ ಎಂದು ಪತ್ರ ಕೊಟ್ಟು, ಇನ್ನೊಂದು ದಿನ ಕೊಡಲ್ಲ ಅಂದರೆ ಏನರ್ಥ. ಇದರಲ್ಲಿ ರಾಜಕೀಯದ ಷಡ್ಯಂತ್ರ ಇದೆ, ಇದನ್ನು ನಾವು ಖಂಡಿಸುತ್ತೇವೆ. ಅವರೇನು ಪುಕ್ಸಟ್ಟೆಯಾಗಿ ಅಕ್ಕಿ ಕೊಡಲ್ಲ, ಹಣ ಕೊಡುತ್ತೇವೆ ಅಕ್ಕಿ ಕೊಡಬೇಕು.
ಛತ್ತೀಸ್‌ಗಢ, ಪಂಜಾಬ್‌ನಿಂದ ಅಕ್ಕಿ ಖರೀದಿಸುತ್ತೇವೆ ಎಂದು ಹೇಳಿದರು. ಹಾಲಿನ ದರ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಾಲಿನ ದರ ಏರಿಕೆ ಮಾಡಬೇಕಿನ್ನುವುದು ಸರಕಾರದ ನಿರ್ಧಾರವಲ್ಲ, ಅದು ನನ್ನ ಅಭಿಪ್ರಾಯ. ರೈತರಿಗೆ ಉತ್ಪಾದನ ವೆಚ್ಚ ಜಾಸ್ತಿ ಆಗಿದೆ. ರೈತರಿಗೆ ಐದು ರೂಪಾಯಿ ಹೆಚ್ಚಿಗೆ ದೊರಕಿಸಿಕೊಡಬೇಕು ಅನ್ನೋದು ನನ್ನ ಉದ್ದೇಶ. ರೈತರ ಬಗ್ಗೆ ಒಬ್ಬರು ಹೇಳುತ್ತಿಲ್ಲ, ಬರೀ ಗ್ರಾಹಕರ ಬಗ್ಗೆ ಮಾತ್ರ ಹೇಳುತ್ತಿದ್ದಾರೆ ಎಂದರು.
