ಉದಯವಾಹಿನಿ,ಭೋಪಾಲ್: ವೇಗವಾಗಿ ಚಲಿಸುತ್ತಿದ್ದ ರೈಲಿನ ಜನರಲ್ ಬೋಗಿಯಲ್ಲಿ ಮಹಿಳೆಯೊಬ್ಬರ ಬಟ್ಟೆ ಕಿತ್ತೆಸೆದ ಮೂವರು ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿ ಆಕೆಯನ್ನು ರೈಲಿನಿಂದ ಹೊರಗೆ ತಳ್ಳಿದ ಘಟನೆ ಮಧ್ಯ ಪ್ರದೇಶದ ಗ್ವಾಲಿಯಾರ್ ಬಳಿ ನಡೆದಿದೆ. ಮಹಿಳೆಯ ಜೊತೆ ಇದ್ದ ಆಕೆಯ ಸಹೋದ್ಯೋಗಿ ಯುವಕನಿಗೂ ಥಳಿಸಿ ರೈಲಿನಿಂದ ಹೊರಗೆ ದಬ್ಬಲಾಗಿದೆ. ಸಾಮೂಹಿಕ ಬಲಾತ್ಕಾರಕ್ಕೆ ಮಹಿಳೆ ಸಹಕಾರ ನೀಡಲಿಲ್ಲ ಎಂದು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ದುಷ್ಕರ್ಮಿಗಳ ಥಳಿತ ಹಾಗೂ ಚಲಿಸುವ ರೈಲಿನಿಂದ ಹೊರದಬ್ಬಿದ ಪರಿಣಾಮ ಯುವಕ ಹಾಗೂ ಮಹಿಳೆ ಇಬ್ಬರಿಗೂ ಗಾಯಗಳಾಗಿದ್ದವು. ಮಹಿಳೆಯ ಮೈ ಮೇಲೆ ಬಟ್ಟೆಗಳೇ ಇರಲಿಲ್ಲ.
ಈ ವೇಳೆ ಯುವಕ ತನ್ನ ಮೈಮೇಲೆ ಇದ್ದ ಹರಿದ ಬಟ್ಟೆಗಳನ್ನೇ ಮಹಿಳೆಗೆ ಹೊದಿಸಿದ್ದಾನೆ. ಇಬ್ಬರನ್ನೂ ದಟ್ಟ ಕಾಡಿನ ಮಧ್ಯೆ ರೈಲಿನಿಂದ ಹೊರದಬ್ಬಿದ್ದ ಕಾರಣ ಸುಮಾರು 5 ಕಿ. ಮೀ. ದೂರದವರೆಗೂ ಮಹಿಳೆಯನ್ನು ಆಕೆಯ ಸಹೋದ್ಯೋಗಿ ಗೆಳೆಯ ಕಾಡಿನ ದಾರಿಯಲ್ಲಿ ಹೊತ್ತುಕೊಂಡು ಬಂದಿದ್ದಾನೆ. ದಟ್ಟ ಕಾಡಿನ ಮಧ್ಯೆ ಬರುವಾಗ ಮಳೆ ಕೂಡಾ ಸುರಿಯುತ್ತಿತ್ತು. ಆದ್ರೂ ಧೃತಿಗೆಡದ ಯುವಕ ಆಕೆಯನ್ನು ಆದಷ್ಟು ಬೇಗ ಆಸ್ಪತ್ರೆಗೆ ಸಾಗಿಸಬೇಕೆಂಬ ಉದ್ದೇಶದಿಂದ ಹೊತ್ತು ತಂದಿದ್ದಾನೆ. ಜೂನ್ 19 ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಗಾಯಾಳು ಮಹಿಳೆ ಹಾಗೂ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಮೂವರು ದುಷ್ಕರ್ಮಿಗಳ ಪತ್ತೆಗೆ ಕ್ರಮ ವಹಿಸಿದ್ದಾರೆ.
