ಉದಯವಾಹಿನಿ, ರಾಯಚೂರು: ಕಲಿಯುಗ ಕಾಮಧೇನು ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಗಳು ಸಶರೀರರಾಗಿ ವೃಂದಾವನಸ್ಥರಾಗಿ 354 ವರ್ಷಗಳು ಸಂದಿರುವ ಹಿನ್ನೆಲೆ ಎಲ್ಲೆಡೆ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ.ಮಂತ್ರಾಲಯದಲ್ಲಿ ಇಂದು ಪೂರ್ವಾರಾಧನೆಯ ಸಡಗರವಿದ್ದು, ಬೆಳಗಿನ ಜಾವದಿಂದಲೇ ನಾನಾ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ. ಇಂದು ವಿಶೇಷವಾಗಿ ನಿರ್ಮಾಲ್ಯ ವಿಸರ್ಜನ, ಉತ್ಸವ ರಾಯರ ಪಾದಪೂಜೆ, ಪಂಚಾಮೃತ, ಅಲಂಕಾರ ಸಂತರ್ಪಣ, ಹಸ್ತೋದಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ನಡೆಯಲಿದೆ. ಮಠದ ಪ್ರಾಕಾರದಲ್ಲಿ ರಜತ ಸಿಂಹ, ಗಜ ವಾಹನೋತ್ಸವ ಪಲ್ಲಕ್ಕಿ ಸೇವೆ ನಡೆದವು. ಶ್ರೀರಂಗದ ರಂಗನಾಥ ಸ್ವಾಮಿ ಹಾಗೂ ಕಂಚಿ ವರದರಾಜ ದೇವರ ವಸ್ತ್ರ ಪ್ರಸಾದವನ್ನ ರಾಯರಿಗೆ ಸಮರ್ಪಿಸಲಾಯಿತು.
ಸಂಜೆ ವೇಳೆಗೆ ಜ್ಞಾನಯೋಗ, ಸ್ವಸ್ತಿ ವಾಚನ, ಹಗಲು ದೀವಟಿಗೆ, ಪ್ರಾಕಾರ ಉತ್ಸವಗಳು ಬೆಳ್ಳಿ ,ಚಿನ್ನದ ರಥೋತ್ಸವ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮುಖ್ಯವಾಗಿ ರಾಯರು ರಚಿಸಿದ ಪರಿಮಳ ಗ್ರಂಥವನ್ನ ಪಲ್ಲಕ್ಕಿಯಲ್ಲಿಟ್ಟು ಪಲ್ಲಕ್ಕಿ ಉತ್ಸವ ನಡೆಸಲಾಗುತ್ತದೆ. ಸಂಜೆ ವೇಳೆ ಸಭಾ ಮಂಟಪದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಗುರು ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು. ದೇಶ ಹಾಗೂ ರಾಜ್ಯದ ಮೂಲೆ ಮೂಲೆಯಿಂದ ಭಕ್ತರ ದಂಡು ಹರಿದು ಬಂದಿದೆ. ಸಪ್ತರಾತ್ರೋತ್ಸವ ಹಿನ್ನೆಲೆ ಏಳುದಿನಕಾಲ ಧಾರ್ಮಿಕ ಕಾರ್ಯಕ್ರಮಗಳ ಜೊತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!