ಉದಯವಾಹಿನಿ, ಮುಂಬೈ: 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಮಯದಲ್ಲಿ ಇಬ್ಬರು ನನ್ನನ್ನ ಭೇಟಿಯಾಗಿದ್ದರು. 288 ಸ್ಥಾನಗಳ ಪೈಕಿ ವಿಪಕ್ಷಗಳ ಮೈತ್ರಿಕೂಟಕ್ಕೆ 160 ಸ್ಥಾನಗಳನ್ನು ಗೆಲ್ಲಿಸಿಕೊಡುವ ಆಫರ್ ನೀಡಿದ್ದರು ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಸ್ಫೋಟಕ ಹೇಳಿಕೆ ನೀಢಿದ್ದಾರೆ.
ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳತನ ನಡೆಸಲಾಗಿದೆ ಎಂದು ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು. ರಾಹುಲ್ ಗಾಂಧಿ ಹೇಳಿಕೆ ಬೆಂಬಲಿಸಿರುವ ಶರದ್ ಪವಾರ್ ಮಹಾರಾಷ್ಟ್ರ ಚುನಾವಣೆಯಲ್ಲೂ ಅಕ್ರಮ ನಡೆದಿರುವ ಬಗ್ಗೆ ಸುಳಿವು ಕೊಟ್ಟಿದ್ದಾರೆ.
ಹೌದು. ನಾಗ್ಪುರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ವರ್ಷ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ಇಬ್ಬರು ವ್ಯಕ್ತಿಗಳು ನನ್ನನ್ನ ಭೇಟಿಯಾಗಿದ್ದರು. 288 ಸ್ಥಾನಗಳ ಪೈಕಿ ವಿಪಕ್ಷ ಮೈತ್ರಿಕೂಟಕ್ಕೆ 160 ಸ್ಥಾನ ಗೆಲ್ಲಿಸಿಕೊಡುವ ಆಫರ್ ಕೊಟ್ಟಿದ್ದರು. ನಾನು ಅವರಿಬ್ಬರನ್ನೂ ರಾಹುಲ್ ಗಾಂಧಿ ಅವರಿಗೆ ಪರಿಚಯ ಮಾಡಿಕೊಟ್ಟಿದ್ದೆ. ಆದ್ರೆ ಈ ಆಫರ್ ಅನ್ನು ರಾಹುಲ್ ತಿರಸ್ಕರಿಸಿದ್ರು. ವಿರೋಧ ಪಕ್ಷಗಳಾದ ನಾವು ಇಂತಹ ಕೃತ್ಯಗಳಲ್ಲಿ ಭಾಗಿಯಾಗಬಾರದು. ನಾವು ನೇರವಾಗಿ ಜನರ ಬಳಿಗೆ ಹೋಗಬೇಕು ಅಂತ ಅವರು ಹೇಳಿದ್ದರು ಅಂತ ಪವಾರ್ ತಿಳಿಸಿದರು.
