ಉದಯವಾಹಿನಿ, ನವದೆಹಲಿ: ವೆಸ್ಟ್‌ ಇಂಡೀಸ್‌ ವಿರುದ್ದ ಮೊದಲನೇ ಏಕದಿನ ಪಂದ್ಯದಲ್ಲಿ(PAK vs EWI) ಪಾಕಿಸ್ತಾನ ತಂಡದ ವೇಗಿ ಶಾಹೀನ್‌ ಶಾ ಅಫ್ರಿದಿ 4 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್‌ ಶಮಿ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಶಾಹೀನ್‌ ಅಫ್ರಿದಿ ಅವರ ಮಾರಕ ಬೌಲಿಂಗ್‌ ಸಹಾಯದಿಂದ ಪಾಕಿಸ್ತಾನ ತಂಡ, ಮೊದಲನೇ ಒಡಿಐ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಐದು ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಏಕದಿನ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿದೆ.
ಟ್ರಿನಿಡಾಡ್‌ನಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ವೆಸ್ಟ್‌ ಇಂಡೀಸ್‌ ತಂಡ, 49 ಓವರ್‌ಗಳಿಗೆ 280 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಆ ಮೂಲಕ ಪಾಕಿಸ್ತಾನ ತಂಡಕ್ಕೆ 281 ರನ್‌ಗಳ ಗುರಿಯನ್ನು ನೀಡಿತ್ತು. ಪಾಕಿಸ್ತಾನ ತಂಡದ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದ ಶಾಹೀನ್‌ ಶಾ ಅಫ್ರಿದಿ, 8 ಓವರ್‌ಗಳಿಗೆ 51 ರನ್‌ಗಳನ್ನು ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರು.
ಈ ಗುರಿಯನ್ನು ಹಿಂಬಾಲಿಸಿದ್ದ ಪಾಕಿಸ್ತಾನ ತಂಡದ ಹಾದಿ ಸುಲಭವಾಗಿರಲಿಲ್ಲ. ಹಸನ್‌ ನವಾಝ್‌ ಹಾಗೂ ಮೊಹಮ್ಮದ್‌ ರಿಝ್ವಾನ್‌ ಅವರ ಅರ್ಧಶತಕಗಳ ಬಲದಿಂದ ಪಾಕಿಸ್ತಾನ 48.5 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 284 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಪಾಕಿಸ್ತಾನ 5 ವಿಕೆಟ್‌ ಗೆಲುವು ಪಡೆಯಿತು.

ತಮ್ಮ ಬೌಲಿಂಗ್‌ ಪ್ರದರ್ಶನದಿಂದ ಶಾಹೀನ್‌ ಶಾ ಅಫ್ರಿದಿ ಅವರು ಭಾರತದ ಮೊಹಮ್ಮದ್‌ ಶಮಿ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಐಸಿಸಿ ಪೂರ್ಣ ಪ್ರಮಾಣದ ತಂಡಗಳ ಪೈಕಿ ಅತ್ಯುತ್ತಮ ಸ್ಟ್ರೈಕ್‌ ರೇಟ್‌ನಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್‌ ಎಂಬ ದಾಖಲೆಯನ್ನು ಶಾಹೀನ್‌ ಶಾ ಅಫ್ರಿದಿ ಬರೆದಿದ್ದಾರೆ. ಮೊಹಮ್ಮದ್‌ ಶಮಿ ಆಡಿದ 108 ಏಕದಿನ ಪಂದ್ಯಗಳಲ್ಲಿ 25.85ರ ಸ್ಟ್ರೈಕ್‌ ರೇಟ್‌ನಲ್ಲಿ 206 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಶಾಹೀನ್‌ ಅಫ್ರಿದಿ 65 ಪಂದ್ಯಗಳಿಂದ 25.46ರ ಸ್ಟ್ರೈಕ್‌ ರೇಟ್‌ನಲ್ಲಿ 131 ವಿಕೆಟ್‌ಗಳನ್ನು ಕಬಳಿಸಿದ್ದಾರೆ.‌

Leave a Reply

Your email address will not be published. Required fields are marked *

error: Content is protected !!