ಉದಯವಾಹಿನಿ, ಬೆಂಗಳೂರು : ಬೆಂಗಳೂರು ಮಹಾನಗರದ ಹಲವೆಡೆ ರವಿವಾರ ಸಂಜೆ ಧಾರಾಕಾರ ಮಳೆಯಾಗಿದೆ. ಸುರಿದ ಮಳೆಗೆ ಬೆಂಗಳೂರು ಮಹಾನಗರ ತಂಪಾಗಿದೆ. ಆದರೆ, ವೀಕೆಂಡ್​ ಅಂತ ಎಂಜಾಯ್​ ಮಾಡಲು ಹೊರಗಡೆ ಬಂದಿದ್ದ ಜನರು ಮಳೆಯಲ್ಲಿ ಸಿಲುಕಿ ಪರದಾಡಿದರು, ತೊಯ್ದು ನಿರಾಸೆಯಿಂದ ಮನೆಗಳತ್ತ ತೆರಳಿದರು. ಬೆಂಗಳೂರಿನ ಸಸ್ಯಕಾಶಿ ಲಾಲ್​ಬಾಗ್, ಶಾಂತಿನಗರ, ಜಯನಗರ, ವಿಜಯನಗರ, ಜೆ.ಪಿ.ನಗರ, ಮೆಜೆಸ್ಟಿಕ್, ಸಿಟಿ ಮಾರ್ಕೆಟ್, ಸದಾಶಿವನಗರ, ಹೆಬ್ಬಾಳ, ಬಸವನಗುಡಿ, ಬನಶಂಕರಿ, ಚಂದ್ರಲೇಔಟ್, ಕೋರಮಂಗಲ, ಕೋಣನಕುಂಟೆ ಸೇರಿದಂತೆ ಹಲವೆಡೆ ಮಳೆಯಾಗಿದೆ.
ಅಲ್ಲದೆ, ವಿಧಾನಸೌಧ, ಮೆಜೆಸ್ಟಿಕ್, ಕುಮಾರಕೃಪಾ ರಸ್ತೆ, ರೇಸ್ ಕೋರ್ಸ್, ವಿಂಡ್ಸರ್ ಮ್ಯಾನರ್, ಕಾರ್ಪೋರೇಶನ್ ಸರ್ಕಲ್​ನ ಸುತ್ತಮುತ್ತ ಕೂಡ ಜೋರು ಮಳೆಯಾಯಿತು. ದಿಢೀರನೆ ಮಳೆ ಬಂದಿದ್ದರಿಂದ ಜನರು ಬಸ್​ ನಿಲ್ದಾಣ, ಅಂಗಡಿಗಳ ಎದುರು ಕೆಲ ಗಂಟೆ ಆಸರೆ ಪಡೆದರು. ಇನ್ನು, ಛತ್ರಿ ಹಿಡಿದು ಜನರು ಓಡಾಡುತ್ತಿರುವ ದೃಶ್ಯಗಳು ಕಂಡುಬಂದವು. ಮಳೆಯಿಂದ ಸ್ಕೈ ವಾಕ್, ಬ್ರಿಡ್ಜ್​ಗಳ ಕೆಳಗೆ ಬೈಕ್ ಸವಾರರು ಆಸರೆ ಪಡೆದುಕೊಂಡರು.

ನಿಧಾನಗತಿ ಸಂಚಾರಕ್ಕೆ ಸೂಚನೆ: ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಮಳೆ ಬಂದಿರುವುದರಿಂದ ನೀರು ರಸ್ತೆ ಮೇಲೆ ನಿಂತಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಹೀಗಾಗಿ, ಬೆಂಗಳೂರು ಸಂಚಾರಿ ಪೊಲೀಸರು ನಿಧಾನವಾಗಿ ಸಂಚಾರ ಮಾಡುವಂತೆ ವಾಹನ ಸವಾರರಿಗೆ ಸೂಚನೆ ನೀಡಿದ್ದಾರೆ. ರಾಮಮೂರ್ತಿ ನಗರ ಸಿಗ್ನಲ್ ಬಳಿ ನೀರು ನಿಂತಿದೆ. ಓಎಂಆರ್ ರಸ್ತೆಯಲ್ಲಿ ನೀರು ನಿಂತಿರುವುದರಿಂದ ಕೆಆರ್​ಪುರ ಕಡೆಯಿಂದ ಹೊಸಕೋಟೆ ಮಾರ್ಗವಾಗಿ ವಾಹನಗಳ ಸಂಚಾರ ನಿಧಾನಗತಿಯಲ್ಲಿದೆ. ಹಾಗೇ ವಡ್ಡರಪಾಳ್ಯದಿಂದ ಹೆಣ್ಣೂರು ಕಡೆಗೆ ಮತ್ತು ವಡ್ಡರಪಾಳ್ಯದಿಂದ ಗೆದ್ದಲಹಳ್ಳಿ ಎರಡೂ ಕಡೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಟ್ರಾಫಿಕ್​ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!