ಉದಯವಾಹಿನಿ, ಬೆಂಗಳೂರು : ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಒಂದೆಡೆಯಾದರೆ, ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವುದು ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಇದೇ ಗುರುವಾರ ಬೆಳಗ್ಗಿನ ವೇಳೆಯಲ್ಲಿ ಹೊರ ವರ್ತುಲದ ರಸ್ತೆಯ ಬಳಗೆರೆ ಟಿ ಜಂಕ್ಷನ್ ಬಳಿ ಹಲವಾರು ಶಾಲಾ ಬಸ್‌ಗಳು ಒಂದು ಗಂಟೆಗೂ ಹೆಚ್ಚು ಕಾಲ ನಿಂತುಕೊಂಡಿದ್ದು, ಪೋಷಕರು ಹಾಗು ಮಕ್ಕಳು ಈ ಟ್ರಾಫಿಕ್ ಜಾಮ್‌ನಿಂದ ಹೈರಾಣಾಗಿ ಹೋಗಿದ್ದಾರೆ. ಹೌದು, ಇದರಿಂದ ಮಕ್ಕಳು ಒಂದು ಗಂಟೆಗಳ ಕಾಲ ತಡವಾಗಿ ಶಾಲೆಗೆ ತಲುಪಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಪೋಷಕರು ಅಕ್ರೋಶ ವ್ಯಕ್ತಪಡಿಸಿದ್ದು, ಈ ವಿಚಾರದ ಬಗ್ಗೆ ದಿ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ತಿಳಿಸಿದೆ.
ರಸ್ತೆ ಕಾಮಗಾರಿ ವಿಳಂಬ, ಶಾಲಾ ಮಕ್ಕಳಿಗೆ ತೊಂದರೆ: ಪಾಣತ್ತೂರು ಎಸ್-ಕ್ರಾಸ್ ಕಾಮಗಾರಿ ನಡೆಯುತ್ತಿದ್ದು, ಹೀಗಾಗಿ ಬಿಬಿಎಂಪಿ ಬಳಗೆರೆ ಟಿ-ಕ್ರಾಸ್ ಜಂಕ್ಷನ್ ಮತ್ತು ಪಾಣತ್ತೂರು ರೈಲ್ವೆ ಅಂಡರ್‌ಪಾಸ್ ನಡುವಿನ ಮಾರ್ಗವು ಕಾಂಕ್ರೀಟ್ ಕರಣಗೊಳ್ಳುತ್ತಿದೆ. ಆಗಸ್ಟ್ 6-10 ರವರೆಗೆ ಈ ರಸ್ತೆ ಸಂಚಾರಕ್ಕೆ ಸ್ಥಗಿತಗೊಳಿಸಲಾಗಿದ್ದು, ಬೆಂಗಳೂರು ಸಂಚಾರಿ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ. ಹೀಗಾಗಿ ಸಾವಿರಾರು ಐಟಿ ವೃತ್ತಿಪರರು ಓಡಾಡುವ ಈ ಕಾರಿಡಾರ್‌ನಲ್ಲಿ ಪ್ರತಿದಿನ ನೂರಾರು ಶಾಲಾ ಬಸ್‌ಗಳು ಓಡಾಡುತ್ತವೆ. ಟ್ರಾಫಿಕ್ ಜಾಮ್‌ನಿಂದಾಗಿ ತಿಂಗಳಿಂದ ಮಕ್ಕಳು ಶಾಲೆಗೆ ಹೋಗಲು ಕಷ್ಟ ಪಡುತ್ತಿದ್ದು, ಈ ಸಮಸ್ಯೆಯ ಬಗ್ಗೆ ತಿಳಿದಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆ ಕಾಮಗಾರಿ ನಡೆಯುತ್ತಿದ್ದು ಇದರಿಂದ ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಪೋಷಕರು ದಿ ಟೈಮ್ ಆಫ್ ಇಂಡಿಯಾದೊಂದಿಗೆ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
