ಉದಯವಾಹಿನಿ, ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಮಹಿಳಾ ಏಕದಿನ ವಿಶ್ವಕಪ್‌ಗೆ (Womens ODI World Cup 2025) ಎರಡು ತಿಂಗಳಿಗಿಂತ ಕಡಿಮೆ ಸಮಯವಿದೆ. ಆದಾಗ್ಯೂ ಆತಿಥೇಯ ಟೀಂ ಇಂಡಿಯಾ ಸೇರಿದಂತೆ ಎಲ್ಲಾ ತಂಡಗಳು ಈಗಾಗಲೇ ಅಭ್ಯಾಸದಲ್ಲಿ ನಿರತವಾಗಿವೆ. ಈ ನಡುವೆ ಭಾರತದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಲುವಾಗಿ ನ್ಯೂಜಿಲೆಂಡ್ ತಂಡದ ಆಟಗಾರ್ತಿಯರು (New Zealand women’s cricket team) ಚೆನ್ನೈಗೆ ಆಗಮಿಸಿದ್ದಾರೆ. 10 ಸದಸ್ಯರ ತಂಡದಲ್ಲಿರುವ ಏಳು ಕ್ರಿಕೆಟಿಗರು ಕೇಂದ್ರೀಯ ಒಪ್ಪಂದವನ್ನು ಹೊಂದಿದ್ದು, ಮುಖ್ಯ ಕೋಚ್ ಬೆನ್ ಸಾಯರ್ ಮತ್ತು ಸಹಾಯಕ ಕೋಚ್ ಕ್ರೇಗ್ ಮೆಕ್‌ಮಿಲನ್ ಅವರ ಮಾರ್ಗದರ್ಶನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಕಾಡೆಮಿಯಲ್ಲಿ ಎರಡು ವಾರಗಳ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.

ನ್ಯೂಜಿಲೆಂಡ್ ತಂಡವು ಮಹಿಳಾ ಟಿ20 ವಿಶ್ವಕಪ್‌ನ ಹಾಲಿ ಚಾಂಪಿಯನ್ ಆಗಿದ್ದು, ಇದೀಗ ಸೆಪ್ಟೆಂಬರ್ 30 ರಿಂದ ಪ್ರಾರಂಭವಾಗುವ ಏಕದಿನ ವಿಶ್ವಕಪ್ ಗೆಲ್ಲುವ ಇರಾದೆಯೊಂದಿಗೆ ಅಖಾಡಕ್ಕಿಳಿಯಲಿದೆ. ಚೆನ್ನೈನಲ್ಲಿ ಅಭ್ಯಾಸ ನಡೆಸುತ್ತಿರುವ ಆಟಗಾರ್ತಿಯರ ಪೈಕಿ, ವೇಗದ ಬೌಲರ್ ಜೆಸ್ ಕೆರ್, ಯುವ ಆರಂಭಿಕ ಆಟಗಾರ್ತಿ ಜಾರ್ಜಿಯಾ ಪ್ಲೈಮರ್ ಮತ್ತು ಆಲ್‌ರೌಂಡರ್ ಬ್ರೂಕ್ ಹಾಲಿಡೇ ಸೇರಿದ್ದಾರೆ. ಇವರಲ್ಲದೆ, ಇಜ್ಜಿ ಶಾರ್ಪ್, ಫ್ಲೋರಾ ಡೆವನ್‌ಶೈರ್ ಮತ್ತು ಎಮ್ಮಾ ಮೆಕ್‌ಲಿಯೋಡ್‌ರಂತಹ ಉದಯೋನ್ಮುಖ ಆಟಗಾರ್ತಿಯರೂ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.

ಕೋಚ್ ಹೇಳಿದ್ದೇನು..?: ನ್ಯೂಜಿಲೆಂಡ್‌ನಲ್ಲಿ ಚಳಿಗಾಲ ಇರುವುದರಿಂದ ಭಾರತದಲ್ಲಿ ತರಬೇತಿ ಶಿಬಿರವನ್ನು ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಾಯರ್ ಹೇಳಿದರು. ‘ನ್ಯೂಜಿಲೆಂಡ್‌ನಲ್ಲಿ ಸದ್ಯಕ್ಕೆ ಚಳಿಗಾಲವಾಗಿದ್ದು, ಅಲ್ಲಿ ಯಾವುದೇ ಕ್ರಿಕೆಟ್ ಆಡುತ್ತಿಲ್ಲ, ಆದರೆ ವಿಶ್ವಕಪ್ ಆರಂಭವಾಗಲು ಎರಡು ತಿಂಗಳಿಗಿಂತ ಕಡಿಮೆ ಸಮಯ ಉಳಿದಿದೆ. ಇಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಂಡ ನಂತರ, ನಮ್ಮ ಆಟಗಾರ್ತಿಯರು ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದು ಸಾಯರ್ ಹೇಳಿದ್ದಾರೆ ಎಂದು ಇಎಸ್‌ಪಿಎನ್‌ಕ್ರಿಕ್‌ಇನ್ಫೋ ವರದಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!