ಉದಯವಾಹಿನಿ, ರಾಯಚೂರು: ಮಂತ್ರಾಲಯ ರಾಯರ ಮಠದಲ್ಲಿ ಆರಾಧನಾ ಮಹೋತ್ಸವದ ಮುಖ್ಯ ಘಟ್ಟವಾದ ಮಧ್ಯಾರಾಧನೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಮಠದ ಪ್ರಾಕಾರದಲ್ಲಿ ಅದ್ದೂರಿಯಾಗಿ ಚಿನ್ನದ ರಥೋತ್ಸವ ಜರುಗಿತು.
ತುಂಗಾ ತೀರನಿವಾಸಿ, ಭಕ್ತರ ಪಾಲಿನ ಕಲ್ಪತರು ಕಾಮಧೇನು, ಮಂತ್ರಾಕ್ಷತೆ ಮಹಿಮೆಯ ಮಹಾಪುರುಷ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಮಂತ್ರಾಲಯದಲ್ಲಿ ಕಳೆಗಟ್ಟಿದೆ. ಗುರುರಾಘವೇಂದ್ರ ಸ್ವಾಮಿಗಳು ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 353 ವರ್ಷಗಳು ಸಂದಿವೆ. ಶ್ರಾವಣ ಶುಕ್ಲ ಪಕ್ಷದ ಬಿದಿಗೆಯ ಮಂಗಳಕರವಾದ ಈ ದಿನವನ್ನ ಮಧ್ಯಾರಾಧನೆಯಾಗಿ ಆಚರಿಸಲಾಗುತ್ತಿದೆ. ಮಧ್ಯಾರಾಧನೆಯ ಅಂಗವಾಗಿ ಮಠದ ಪ್ರಾಕಾರದಲ್ಲಿ ಚಿನ್ನದ ರಥೋತ್ಸವ ಅದ್ದೂರಿಯಾಗಿ ಜರುಗಿದೆ. ರಾಯರು ರಚಿಸಿದ ಪರಿಮಳ ಗ್ರಂಥ ಹಾಗೂ ಮೃತ್ತಿಕಾ ಬೃಂದಾವನವನ್ನಿಟ್ಟು ಮಠದ ಪ್ರಾಂಗಣದಲ್ಲಿ ಸ್ವರ್ಣ ರಥೋತ್ಸವ ನೆರವೇರಿಸಲಾಯಿತು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ನಡೆದ ಚಿನ್ನದ ರಥೋತ್ಸವದ ವೇಳೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

ಇದಕ್ಕೂ ಮುನ್ನ ಈ ದಿನ ವಿಶೇಷವಾಗಿ ಸ್ವತಃ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ರಾಯರ ವೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕವನ್ನ ನೆರವೇರಿಸಿದರು. ಹಾಲು, ಮೊಸರು, ತುಪ್ಪ, ಜೇನುತುಪ್ಪ, ಹಣ್ಣು, ಗೋಡಂಬಿ, ಒಣದ್ರಾಕ್ಷಿ ಸೇರಿ ವಿವಿಧ ಪದಾರ್ಥಗಳಿಂದ ಶ್ರೀಗಳು ವೃಂದಾವನದ ನಾಲ್ಕು ದಿಕ್ಕಿಗೂ ಅಭಿಷೇಕ ಮಾಡಿದರು. ಬಳಿಕ ಚಿನ್ನದ ಕವಚದೊಂದಿಗೆ ಅಲಂಕಾರ ಪೂಜೆ ನಡೆಯಿತು.ಇಂದಿಗೂ ರಾಯರು ವೃಂದಾವನದಲ್ಲಿ ತಮ್ಮ ಯೋಗ ಸಾಮರ್ಥ್ಯದಿಂದ ಸಶರೀರರಾಗಿದ್ದು, ಇಂದು ವಿಶೇಷವಾಗಿ ಭಕ್ತರನ್ನ ಅನುಗ್ರಹಿಸುತ್ತಾರೆ ಅನ್ನೋ ಪ್ರತೀತಿಯಿದೆ. ಈ ಹಿನ್ನೆಲೆ ಮಧ್ಯಾರಾಧನೆ ಎನ್ನುವುದು ಆರಾಧನಾ ಮಹೋತ್ಸವದಲ್ಲಿ ವಿಶೇಷವಾದದ್ದು. ಇನ್ನೂ ನೂತನವಾಗಿ ನಿರ್ಮಾಣವಾದ ಪರಿಮಳ ತೀರ್ಥ ಪುಷ್ಕರಣಿಯಲ್ಲಿ ರಾತ್ರಿ ವೇಳೆ ತೆಪ್ಪೋತ್ಸವ ಜರುಗಲಿದೆ.

Leave a Reply

Your email address will not be published. Required fields are marked *

error: Content is protected !!