ಉದಯವಾಹಿನಿ, ಚೆನ್ನೈ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಗೋ ವಿಮಾನವೊಂದರ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಕೌಲಾಲಂಪುರ್‌ದಿಂದ ಚೆನ್ನೈಗೆ ಬರುತ್ತಿದ್ದ ಕಾರ್ಗೋ ವಿಮಾನವು (Cargo Flight) ಲ್ಯಾಂಡಿಂಗ್ ಆಗುತ್ತಿದ್ದಾಗ ಎಂಜಿನ್‌ನಿಂದ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ವಿಮಾನ ನಿಲ್ದಾಣದ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ, ಬೆಂಕಿಯನ್ನು ನಿಯಂತ್ರಣಕ್ಕೆ ತಂದಿತು. ಪ್ರಾಥಮಿಕ ತನಿಖೆಯಲ್ಲಿ ತಾಂತ್ರಿಕ ದೋಷವೇ ಈ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ.
ವಿಮಾನದ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದ್ದು, ಈ ವೇಳೆ ಯಾವುದೇ ಪ್ರಯಾಣಿಕರು ಇರಲಿಲ್ಲ ಎಂದು ತಿಳಿದುಬಂದಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಸದ್ಯ ಎಂದಿನಂತೆ ವಿಮಾನಗಳು ಕಾರ್ಯಾಚರಣೆ ಮಾಡುತ್ತಿದ್ದು, ಈ ಘಟನೆಯಿಂದ ವಿಮಾನ ಹಾರಾಟದ ವೇಳಾಪಟ್ಟಿಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನಯಾನ ಸುರಕ್ಷತಾ ದೃಷ್ಟಿಯಿಂದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ವಿಮಾನಯಾನ ಇಲಾಖೆಯು ಸಮಗ್ರ ತನಿಖೆಗೆ ಆದೇಶಿಸಿದೆ.
