ಉದಯವಾಹಿನಿ, ನವದೆಹಲಿ: ಭಾರತೀಯ ಆಧುನಿಕ ಕ್ರಿಕೆಟ್‌ನ ದಿಗ್ಗಜರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ವೇಳೆ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯಲು ಅವರು ಬಯಸಿದ್ದಾರೆ. ರೋಹಿತ್‌ ಶರ್ಮಾ ಅವರಿಗಿಂತ ವಿರಾಟ್‌ ಕೊಹ್ಲಿ ಅವರು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಇದೀಗ ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಆಕಾಶ್‌ ಚೋಪ್ರಾ ಕೂಡ ಅಚ್ಚರಿ ಮೂಡಿಸಿದ್ದಾರೆ. ಈ ಇಬ್ಬರೂ ಟೆಸ್ಟ್‌ಗೆ ವಿದಾಯ ಹೇಳುವ ಬದಲು ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಬೇಕಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಬಳಿಕ ಟಿ20ಐ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು. ಇದಾದ ಬಳಿಕ ಅವರು ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಭಾರತ ತಂಡವನ್ನು ತಲುಪಿಸಲು ಈ ಇಬ್ಬರೂ ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ, ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯಲ್ಲಿನ ಸೋಲಿನ ಬಳಿಕ ಭಾರತ ತಂಡ ಫೈನಲ್‌ ರೇಸ್‌ನಿಂದ ಹೊರ ಬಿದ್ದಿತ್ತು. ನಂತರ 2025ರ ಐಪಿಎಲ್‌ ಟೂರ್ನಿಯ ವೇಳೆ ಈ ಇಬ್ಬರೂ ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದರು.
ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆಕಾಶ್‌ ಚೋಪ್ರಾ, “ಸತ್ಯವೆಂದರೆ ಅವರು ಸೂಕ್ತವಲ್ಲದ ಸ್ವರೂಪಕ್ಕೆ ವಿದಾಯ ಹೇಳಿದ್ದಾರೆ. ಟಿ20 ವಿಶ್ವಕಪ್ ಗೆದ್ದ ನಂತರ ಅವರು ಟಿ20ಐ ವೃತ್ತಿ ಜೀವನವನ್ನು ತೊರೆದಿದ್ದರು, ಆದರೆ ಅವರು ಟೆಸ್ಟ್ ಕ್ರಿಕೆಟ್‌ ಆಡುವುದನ್ನು ಮುಂದುವರಿಸಿ, ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೆ ಕಥೆ ಬೇರೆಯೇ ಆಗುತ್ತಿತ್ತು. ಚಾಂಪಿಯನ್ಸ್ ಟ್ರೋಫಿಗೆ ಮುನ್ನ 12 ತಿಂಗಳಲ್ಲಿ ಭಾರತ ಕೇವಲ ಆರು ಏಕದಿನ ಪಂದ್ಯಗಳನ್ನು ಆಡಿತ್ತು.” ಎಂದು ಹೇಳಿದ್ದಾರೆ.”ಒಂದು ವರ್ಷಕ್ಕೆ ಆರು ಟೆಸ್ಟ್‌ ಪಂದ್ಯಗಳನ್ನು ಆಡುವ ಸಾಧ್ಯತೆ ಇದೆ. ಆದರೆ, ಇದು ಆರು ಟೆಸ್ಟ್‌ ಪಂದ್ಯಗಳಾಗಿದ್ದರೆ, ನೀವು ವರ್ಷದಲ್ಲಿ ಕೇವಲ 30 ದಿನಗಳ ಕಾಲ ಮಾತ್ರ ಆಡುತ್ತೀರಿ. ಒಂದು ವೇಳೆ ನೀವು ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದರೆ, ವರ್ಷಕ್ಕೆ ಕೇವಲ ಆರು ದಿನಗಳಲ್ಲಿ ಪಂದ್ಯಗಳು ಮುಗಿಯುತ್ತವೆ. ಐಪಿಎಲ್‌ ಟೂರ್ನಿಯಕೊನೆಯ ಪಂದ್ಯದಿಂದ ನಿಮಗೆ ಏಕದಿನ ಪಂದ್ಯಕ್ಕೆ 100 ದಿನಗಳು ಅಂತರವಿರಲಿದೆ. ನೀವು ಎಲ್ಲವನ್ನೂ ಆಡಲು ಸಾಧ್ಯವಿಲ್ಲವಾದರೆ, ನೀವು ನಿಯಮಿತವಾಗಿ ಆಡಲು ಸಾಧ್ಯವಾಗುವುದಿಲ್ಲ,” ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!