ಉದಯವಾಹಿನಿ, ಬೆಂಗಳೂರು: ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಪೂಜೆ ಮಾಡುವಾಗ ಕನ್ನಡದಲ್ಲಿ ಶ್ಲೋಕ ಹೇಳಬೇಕು, ಹೀಗಾಗಿ ಕನ್ನಡ ಶ್ಲೋಕ ಕಲಿಯಲು ಸೂಚನೆ ಕೊಡೋದಾಗಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಪ್ರಶ್ನೆ ಕೇಳಿದರು. ನಮ್ಮ ಮುಜರಾಯಿ ದೇವಾಲಯಗಳಲ್ಲಿ ಪೂಜೆ ಮಾಡುವಾಗ ಶ್ಲೋಕಗಳನ್ನು ಸಂಸ್ಕೃತದಲ್ಲಿ ಹೇಳುತ್ತಿದ್ದಾರೆ. ತಮಿಳುನಾಡು ರಾಜ್ಯದಲ್ಲಿ ತಮಿಳಿನಲ್ಲಿ ಶ್ಲೋಕ ಹೇಳುತ್ತಾರೆ. ಅದೇ ರೀತಿ ಕರ್ನಾಟಕದ ದೇವಾಲಯಗಳಲ್ಲೂ ಕನ್ನಡದಲ್ಲಿ ಶ್ಲೋಕ ಹೇಳುವಂತೆ ಕ್ರಮ ಆಗಬೇಕು. ಹಿರೇಮಗಳೂರು ಕಣ್ಣನ್ ಅವರು ಕನ್ನಡದಲ್ಲಿ ಶ್ಲೋಕ ಹೇಳ್ತಾರೆ. ಅದರಂತೆ ಕನ್ನಡದಲ್ಲಿ ಶ್ಲೋಕ ಹೇಳುವಂತೆ ಕ್ರಮ ಆಗಬೇಕು ಎಂದರು.
ದೇವಾಲಯಗಳಲ್ಲಿ ಸ್ವಚ್ಛತೆ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ತಿರುಪತಿ ಮಾದರಿಯಲ್ಲಿ ನಮ್ಮ ದೇವಾಲಯಗಳಲ್ಲಿ ಸ್ವಚ್ಛತೆ ನಿರ್ವಹಣೆಗೆ ಕ್ರಮವಹಿಸಬೇಕು. ನಮ್ಮ ದೇವಾಲಯಗಳಲ್ಲಿ ಸ್ವಚ್ಛತೆ ಸರಿಯಾಗಿ ಆಗಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಚಿವ ರಾಮಲಿಂಗಾರೆಡ್ಡಿ ಅವರು ಉತ್ತರ ನೀಡಿ, ಆಗಮ ಶಿಕ್ಷಣದಲ್ಲಿ ಅನೇಕ ವರ್ಷಗಳಿಂದ ಸರ್ಟಿಫಿಕೇಟ್ ಕೊಟ್ಟಿರಲಿಲ್ಲ. ಈಗ ನಾವು ಕೊಡ್ತಿದ್ದೇವೆ. ಕನ್ನಡದಲ್ಲಿ ಶ್ಲೋಕ ಅಭ್ಯಾಸ ಮಾಡಲು ಸೂಚನೆ ಕೊಡ್ತೀವಿ ಎಂದರು. ದೇವಾಲಯಗಳಲ್ಲಿ ಆ.15ರಿಂದ ಪ್ಲಾಸ್ಟಿಕ್ ನಿಷೇಧ ಮಾಡಲಾಗುತ್ತಿದೆ. ದೇವಾಲಯಗಳಲ್ಲಿ ಪ್ಲಾಸ್ಟಿಕ್ ನಿಷೇಧದ ಜೊತೆಗೆ ಸ್ವಚ್ಛತೆಗೂ ಸೂಚನೆ ಕೊಡ್ತೀವಿ ಎಂದು ಹೇಳಿದರು.
