ಉದಯವಾಹಿನಿ, ಬೆಂಗಳೂರು: ಡಿಸೆಂಬರ್ ತಿಂಗಳ ಒಳಗೆ 2 ಲಕ್ಷ ಮಂಜೂರಿ ದಾರರಿಗೆ ಪೋಡಿಗಳನ್ನು ವಿತರಣೆ ಮಾಡುವ ಗುರಿ ಹೊಂದಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಎಂಟಿಬಿ ನಾಗರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಪೋಡಿಗಳನ್ನು ವಿತರಣೆ ಮಾಡಲು ಕೆಲವು ತಾಂತ್ರಿಕ ಕಾರಣಗಳು ಎದುರಾಗಿದ್ದವು. ಈಗ ಎಲ್ಲಾ ದಾಖಲೆಗಳನ್ನು ಸರಿಪಡಿಸಿ ಅಂತಿಮವಾಗಿ 2 ಲಕ್ಷ ಪೋಡಿಗಳನ್ನು ವಿತರಣೆ ಮಾಡುವ ಗುರಿ ನಮದಾಗಿದೆ ಎಂದರು. 2013-18ರಲ್ಲಿ 5800, 2018-2023ರಿಂದ 8500 ಪೋಡಿಗಳನ್ನು ವಿತರಣೆ ಮಾಡಲಾಗಿತ್ತು.ನಾವು ಇಲಾಖೆ ಅಧಿಕಾರಿಗಳ ಜೊತೆ ನಡೆಸಿದ ಸಭೆ, ದಾಖಲಾತಿಗಳ ತಿದ್ದುಪಡಿ ಸೇರಿದಂತೆ ಹಲವು ಕ್ರಮಗಳನು್ನ ತೆಗೆದುಕೊಂಡ ಪರಿಣಾಮ ಒಂದು ಹಂತಕ್ಕೆ ಬಂದಿದ್ದೇವೆ. ಹಿಂದೆ ಖಾಸಗಿಯವರಿಗೆ ಮಾತ್ರ ಪೋಡಿ ನೀಡಲಾಗಿತ್ತು ಎಂದು ತಿಳಿಸಿದರು.
ಈ ಹಿಂದೆ ಏಕವ್ಯಕ್ತಿ ಪೋಡಿ ಪದ್ದತಿ ಮತ್ತು ಅರ್ಜಿ ಕೊಟ್ಟವರಿಗೆ ಮಾತ್ರ ಪೋಡಿ ವಿತರಿಸುವ ವ್ಯವಸ್ಥೆ ಇತ್ತು. ಯಾರಿಗೆ ಅರ್ಜಿ ಸಲ್ಲಿಸಲು ಸಾಮರ್ಥ್ಯವಿತ್ತೋ ಅಂಥವರಿಗೆ ಪೋಡಿಯನ್ನು ಕೊಡುತ್ತಿದ್ದವು. ಸಾಮರ್ಥ್ಯ ಇಲ್ಲದವರು ಪೋಡಿಯನ್ನೇ ಪಡೆಯುತ್ತಿರಲಿಲ್ಲ. ಇನ್ನು ಮುಂದೆ ಅರ್ಜಿ ಕೊಟ್ಟರೆ ಸಾಕು ಸರ್ಕಾರವೇ ಪೋಡಿಯನ್ನು ಕೊಡುವ ತೀರ್ಮಾನಕ್ಕೆ ಬಂದಿದೆ ಎಂದು ಹೇಳಿದರು.
