ಉದಯವಾಹಿನಿ, ಮಂಡ್ಯ: ಗ್ರಾಮಲೆಕ್ಕಿಗನ ವರ್ಗಾವಣೆಗಾಗಿ 40 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಾಂಡವಪುರ ತಹಶೀಲ್ದಾರ್ ಕೆ.ಸಿ.ಸೌಮ್ಯ ಅವರು ಗುರುವಾರ ಸಂಜೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಪಾಂಡವಪುರ ತಾಲೂಕಿನಲ್ಲಿ ಗ್ರಾಮ ಲೆಕ್ಕಿಗರಾಗಿ ಕೆಲಸ ನಿರ್ವಹಿಸುತ್ತಿದ್ದ ಮರಿಸ್ವಾಮಿ ಅವರನ್ನು ಬೇರೆಡೆ ವರ್ಗಾವಣೆ ಮಾಡುವುದಕ್ಕಾಗಿ ಕೆ.ಎಸ್.ಸೌಮ್ಯ ಅವರು 40 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ನಿನ್ನೆ ಸಂಜೆ ಪಾಂಡವಪುರ ತಹಶೀಲ್ದಾರ್ ಕಚೇರಿಯಲ್ಲಿ ಮರಿಸ್ವಾಮಿ ಅವರಿಂದ 40 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಡಿವೈಎಸ್ ಪಿ.ಸುನೀಲ್ ಕುಮಾರ್, ಸಬ್ ಇನ್ಸ್ ಪೆಕ್ಟರ್‌ಗಳಾದ ಬ್ಯಾಟರಾಯಗೌಡ, ಮೋಹನ್ ರೆಡ್ಡಿ, ಪ್ರಕಾಶ್ ಅವರು ದಾಳಿ ನಡೆಸಿ, ತಹಶೀಲ್ದಾರ್ ಸೌಮ್ಯ ಅವರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ರಾತ್ರಿ 9 ಗಂಟೆಯವರೆಗೂ ತಹಶೀಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
