ಉದಯವಾಹಿನಿ, ಪಾಟ್ನಾ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನ ವಿರೋಧ ಪಕ್ಷ ಮೈತ್ರಿಕೂಟ ಸ್ಥಾಪಿಸುವ ಮೊದಲ ಸಭೆಯಲ್ಲಿಯೇ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ತೀವ್ರ ಜಟಾಪಟಿ ನಡೆದಿದೆ. ಕೇಂದ್ರ ಸರ್ಕಾರವು ದಿಲ್ಲಿಯ ಆಡಳಿತದ ವಿಚಾರವಾಗಿ ಹೊರಡಿಸಿರುವ ಸುಗ್ರೀವಾಜ್ಞೆ ಕುರಿತಂತೆ ಕಾಂಗ್ರೆಸ್ ಸರಿಯಾದ ನಿಲುವು ಪ್ರದರ್ಶಿಸಿಲ್ಲ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಜತೆ ಕಾಂಗ್ರೆಸ್ ಡೀಲ್ ಕುದುರಿಸಿಕೊಂಡಿದೆ. ಹೀಗಾಗಿ ಈ ಬಗ್ಗೆ ಯಾವುದೇ ನಿಲುವು ತಾಳುತ್ತಿಲ್ಲ ಎಂದು ಎಎಪಿ ಮುಖ್ಯ ವಕ್ತಾರೆ ಪ್ರಿಯಾಂಕಾ ಕಕ್ಕರ್ ಮಾಡಿದ್ದ ಆರೋಪವನ್ನು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪಿಸಿ, ಎಎಪಿಯನ್ನು ತರಾಟೆಗೆ ತೆಗೆದುಕೊಂಡರು. ವಿಪಕ್ಷಗಳ ಮೈತ್ರಿಕೂಟ ರಚನೆಗೆ ಸೇರಿಸ್ದ ಸಭೆಯಲ್ಲಿ ಹಲವು ಸಮಯ ಎಎಪಿಯ ಸಮಸ್ಯೆ ವಿಚಾರವಾಗಿಯೇ ಚರ್ಚೆ ನಡೆಯಿತು.
ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ಮಾತಿನಿಂದ ಕೋಪಗೊಂಡ ಎಎಪಿ, ದಿಲ್ಲಿಯ ಆಡಳಿತಾತ್ಮಕ ಸೇವೆಗಳ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಳ್ಳುವ ಕೇಂದ್ರ ಸರ್ಕಾರದ ಕಠಿಣ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ಸಾರ್ವಜನಿಕವಾಗಿ ವಿರೋಧಿಸುವವರೆಗೂ ಮುಂಬರುವ ವಿಪಕ್ಷಗಳ ಸಭೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಬಾಂಬ್ ಸಿಡಿಸಿದೆ. ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ವಿಪಕ್ಷ ನಾಯಕರು, ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಲು ಎಲ್ಲ ಪಕ್ಷಗಳೂ ಒಪ್ಪಿಕೊಂಡಿವೆ ಎಂದು ಪ್ರಕಟಿಸಿದರು. ಆದರೆ ವಿವರಗಳನ್ನು ಅಂತಿಮಗೊಳಿಸಲು ಇನ್ನೂ ಒಂದು ಸಭೆ ನಡೆಸಲಾಗುವುದು ಎಂದು ಹೇಳಿದರು.
