ಉದಯವಾಹಿನಿ, ಬಳ್ಳಾರಿ: ಹಿಂದೂ, ಮುಸ್ಲಿಂ ಪರಸ್ಪರ ಭಾವೈಕ್ಯತೆಯಿಂದ ರಾಷ್ಟ್ರೀಯ ಏಕತೆಯನ್ನು ಸಾರಲು ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಿದ್ದಾರೆ.ಕೋಮು ಸೌಹಾರ್ದತೆಯಿಂದ ಇಂತಹ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಹಮ್ಮಿಕೊಂಡು ರಾಷ್ಟ್ರೀಯ ಏಕತೆ ಮೂಡಿಸುವ ಜೊತೆಗೆ ಪರಸ್ಪರ ಭಾವೈಕ್ಯತೆಯಿಂದ ದೇಶದ ಪ್ರಗತಿಯ ಸಾಧಿಸುವ ದೃಷ್ಟಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿದೆ. ಮುಸ್ಲಿಮ್ ಕುಟುಂಬದ ಮಕ್ಕಳು ಕೃಷ್ಣ ರಾಧೆಯರ ವೇಷ ತೊಟ್ಟು ಸಂಭ್ರಮಿಸುವ ಮೂಲಕ ಭಾವೈಕ್ಯತೆ ಸಾರಿದರು.
ಶಿಕ್ಷಕ ರವಿಕುಮಾರ ಸಕ್ರಹಳ್ಳಿ ಮಾತನಾಡಿ ರಾಷ್ಟ್ರೀಯ ಏಕತೆ, ಕೋಮು ಸೌಹಾರ್ದತೆ, ಭಾವೈಕ್ಯತೆಯನ್ನು ಮೂಡಿಸಲು ಪಾಲಕರ ಸಹಕಾರದಿಂದ ಉರ್ದು ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. 160 ಮಕ್ಕಳು ಓದುವ ಈ ಶಾಲೆಯಲ್ಲಿ ಗಣೇಶ ಹಬ್ಬ ರಕ್ಷಾ ಬಂಧನ ಶ್ರೀ ಕೃಷ್ಣ ಜನ್ಮಾಷ್ಟಮಿ, ಹಲವಾರು ಸಾಧಕರ ಜಯಂತಿಗಳು ಮುಂತಾದ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಸಡಗರದಿಂದ ಆಚರಿಸುತ್ತೇವೆ ಎಂದರು.
