ಉದಯವಾಹಿನಿ,ಬೆಂಗಳೂರು: ಪಂಚ ಗ್ಯಾರಂಟಿ ಜಾರಿ ಆಗ್ರಹಿಸಿ ಪ್ರತಿಭಟನೆ ನಡೆಸಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಯಾವ ನೈತಿಕತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, 15 ಲಕ್ಷ ರೂ.ಗಳನ್ನು ಪ್ರತಿ ಮನೆಗೆ ಕೊಡುತ್ತೇನೆ ಎಂದವರು 9 ವರ್ಷಗಳಾದರೂ ಈಡೇರಿಸಿಲ್ಲ. ಆದಾಯ ದುಪ್ಪಟ್ಟು ಮಾಡುತ್ತೇವೆ, ನಾ ಖಾವೂಂಗಾ, ನಾ ಖಾನೇದೂಂಗ ಎಂದವರು ಯಾರು? ಅಚ್ಛೇ ದಿನ್ ತಂದುಕೊಟ್ಟಿದ್ದಾರೆಯೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಐದು ಗ್ಯಾರಂಟಿ ಗಳನ್ನು ಈಡೇರಿಸದಿದ್ದರೆ ಅಧಿವೇಶನದಲ್ಲಿ ಧರಣಿ ಕೂರುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಿಂದಿನ ಬಿಜೆಪಿ ಪ್ರಣಾಳಿಕೆಯಲ್ಲಿ ಒಂದು ಲಕ್ಷದವರಿಗಿನ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ್ದರು. ಹತ್ತು ಗಂಟೆ ವಿದ್ಯುತ್ ನೀಡುತ್ತೇವೆ, ನೀರಾವರಿಗೆ ಒಂದೂವರೆ ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದೆಲ್ಲಾ ಹೇಳಿದ್ದರು. ಆದರೆ, ಅವುಗಳನ್ನು ಜಾರಿ ಮಾಡದವರು ಈಗ ಧರಣಿ ಕುಳಿತುಕೊಳ್ಳುವುದಾಗಿ ಹೇಳುತ್ತಾರೆ ಎಂದು ವ್ಯಂಗವಾಡಿದರು. ಈ ಮೂಲಕ ಅವರು ಜನಗಳಿಗೆ ತಪ್ಪು ಮಾಹಿತಿ ನೀಡುತ್ತಾರೆ ಎಂದರು.
