ಉದಯವಾಹಿನಿ, ಮಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡಿ ಅಗೆಯುವ ಕೆಲಸಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಧರ್ಮಸ್ಥಳ, ಬೆಳ್ತಂಗಡಿ, ವೇಣೂರು ಜೊತೆ ಉತ್ತರ ಭಾರತದ ಕಾರ್ಮಿಕರು ಮೂಳೆ ಹುಡುಕುವ ಕೆಲಸ ಮಾಡಿದ್ದರು. 17 ಜಾಗದಲ್ಲಿ ಗುಂಡಿ ತೆಗೆದ ಕಾರ್ಮಿಕರನ್ನು ಇಂದು ವಿಶೇಷ ತನಿಖಾ ತಂಡ ಬೆಳ್ತಂಗಡಿ ಠಾಣೆಗೆ ಕರೆಯಿಸಿಕೊಂಡಿತ್ತು.ಇಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆಯ ಬೆನ್ನಲ್ಲೇ ಎಸ್‌ಐಟಿ ಪೊಲೀಸರು ಎಲ್ಲಾ ಕಾರ್ಮಿಕರನ್ನು ಕರೆಸಿ ಸಹಿ ಪಡೆದುಕೊಂಡರು. ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಕರೆಸುತ್ತೇವೆ ಎಂದು ಹೇಳಿದ ಎಸ್‌ಐಟಿ ಪೊಲೀಸರು ಎಲ್ಲಾ ಕಾರ್ಮಿಕರಿಂದ ಸಹಿ ಪಡೆದು ಕಳುಹಿಸಿದರು.
ಅನಾಮಿಕನ ವಿಚಾರಣೆ: ಇಂದು ಬೆಳ್ತಂಗಡಿ ಎಸ್‌ಐಟಿ ಠಾಣೆಗೆ ಬಂದ ಮುಸುಕುಧಾರಿಯನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಸುಮಾರು ನಾಲ್ಕೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಮಧ್ಯಾಹ್ನ 3 ಗಂಟೆಯ ವೇಳೆಗೆ ಆತನನ್ನು ಬಿಟ್ಟು ಕಳುಹಿಸಿದ್ದಾರೆ. ಸದ್ಯ ಸಾಕ್ಷಿದಾರ ವ್ಯಕ್ತಿ ಬೆಳ್ತಂಗಡಿಯ ಗೌಪ್ಯ ಸ್ಥಳದಲ್ಲಿ ವಾಸವಾಗಿದ್ದಾನೆ.
