ಉದಯವಾಹಿನಿ, ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ ಜಿಲ್ಲೆಯ ಚಶೋತಿಯಲ್ಲಿ ಮೇಘಸ್ಫೋಟದ ಬಳಿಕ ಸತತ ಮೂರನೇ ದಿನವಾದ ಇಂದು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ. ಗ್ರಾಮದಲ್ಲಿ 60 ಜನರು ಪ್ರಾಣ ಕಳೆದುಕೊಂಡಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ನಡುವೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ವಿಪಕ್ಷ ನಾಯಕ ಸುನಿಲ್ ಶರ್ಮಾ, ಮೇಘಸ್ಫೋಟ ಸಂಭವಿಸಿದ ಸ್ಥಳದಲ್ಲಿ ಸುಮಾರು 1200 ಜನರು ಹಾಜರಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ (DGP) ನಳಿನ್ ಪ್ರಭಾತ್ ಅವರೊಂದಿಗೆ ಶುಕ್ರವಾರ ತಡರಾತ್ರಿ ಧ್ವಂಸಗೊಂಡ ಗ್ರಾಮಕ್ಕೆ ಭೇಟಿ ನೀಡಿ, ಪೊಲೀಸರು, ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಗಡಿ ರಸ್ತೆ ಸಂಸ್ಥೆ (BRO), ನಾಗರಿಕ ಆಡಳಿತ ಮತ್ತು ಎತ್ತರದ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯ ಸ್ವಯಂಸೇವಕರು ನಡೆಸುತ್ತಿರುವ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಪರಿಶೀಲಿಸಿದರು.
ಈವರೆಗೂ 46 ಶವಗಳನ್ನು ಗುರುತಿಸಲಾಗಿದೆ ಮತ್ತು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. 75 ಜನರು ಕಾಣೆಯಾಗಿದ್ದಾರೆ ಎಂದು ಅವರ ಕುಟುಂಬಗಳು ವರದಿ ಮಾಡಿವೆ. ಅಲ್ಲದೇ 84 ಮಂದಿಯನ್ನ ಸ್ಥಳಾಂತರಿಸಲಾಗಿದೆ. ಆದ್ರೆ ಸ್ಥಳೀಯರು ಮತ್ತು ಪ್ರತ್ಯಕ್ಷದರ್ಶಿಗಳು ನೂರಾರು ಜನರು ಹಠಾತ್ ಪ್ರವಾಹದಲ್ಲಿ ಕೊಚ್ಚಿಹೋಗಿ ಬೃಹತ್ ಬಂಡೆಗಳು, ದಿಮ್ಮಿಗಳು ಮತ್ತು ಭಗ್ನಾವಶೇಷಗಳ ಅಡಿಯಲ್ಲಿ ಹೂತುಹೋಗಿರಬಹುದು ಎಂದು ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!