ಉದಯವಾಹಿನಿ, ಬೆಂಗಳೂರು: ಧರ್ಮಸ್ಥಳದ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯದ ಜನರ ಕ್ಷಮೆ ಕೇಳಿ ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಅವರು, ಅಲ್ಲಿ ಏನೂ ಸಿಗದ ಕಾರಣ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಹೇಳುತ್ತಿದ್ದಾರೆ. ಡಿ.ಕೆ. ಸುರೇಶ್ ಅವರು ಧರ್ಮಸ್ಥಳ ಧಾರ್ಮಿಕ ಭಾವನೆಗಳ ಕ್ಷೇತ್ರ. ಈ ರೀತಿಯ ಘಟನೆ ಆಗಬಾರದಾಗಿತ್ತು ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.ರಾಜ್ಯ ಸರ್ಕಾರ ಆರ್‌ಸಿಬಿ ಕಪ್ ಗೆದ್ದಾಗ ಮುಂದಾಲೋಚನೆ ಇಲ್ಲದೆ ತಪ್ಪು ಮಾಡಿ ಕಾಲ್ತುಳಿತದಿಂದ 11 ಜನರ ಮರಣಕ್ಕೆ ಕಾರಣವಾಯಿತು. ಇಂತಹ ತಪ್ಪು ಮಾಡಿದ್ದ ಕಾಂಗ್ರೆಸ್ ಸರ್ಕಾರ ಪ್ರಸ್ತುತ ಮತ್ತೊಂದು ಎಡವಟ್ಟನ್ನು ಮಾಡುವುದಕ್ಕೆ ಹೊರಟಿದೆ ಎಂದು ಆರೋಪಿಸಿದರು.ಧರ್ಮಸ್ಥಳ ಒಂದು ಪವಿತ್ರ ಧಾರ್ಮಿಕ ಸ್ಥಳ. ಇಡೀ ರಾಜ್ಯದ ಸಾಮಾನ್ಯ ಜನರೂ ಶ್ರೀ ಮಂಜುನಾಥನ ಕೃಪೆಗೆ ಪಾತ್ರರಾಗಿ ಭಕ್ತಿಯಿಂದ ದರ್ಶನ ಪಡೆಯುವ ಕಾರ್ಯವನ್ನು ಕಾಲದಿಂದಲೂ ಮಾಡಿಕೊಂಡು ಬಂದಿದ್ದಾರೆ.
ಆದರೆ ಒಂದು ಧಾರ್ಮಿಕ ಸ್ಥಳದ ವಿಚಾರದಲ್ಲಿ ತಪ್ಪು ಕಲ್ಪನೆ ಮತ್ತು ಅಪವಾದ ಮಾಡಲು ಇಂದು ಕೆಲವರು ಪ್ರಚೋದನೆಯನ್ನು ಮಾಡುತ್ತಿದ್ದಾರೆ ಎಂದು ದೂರಿದರು. ಇದೇ ಗುಂಪು ಶಬರಿಮಲೆಯಲ್ಲೂ ಅಪಪ್ರಚಾರದ ಕೆಲಸ ಮಾಡಿತ್ತು. ಅಲ್ಲಿ ಏನೂ ಪ್ರಯೋಜನವಾಗಲಿಲ್ಲ. ಇನ್ನಷ್ಟು ಭಕ್ತರು ಹೆಚ್ಚಾದರು. ಪ್ರಸ್ತುತ ಅದೇ ಗುಂಪು ಧರ್ಮಸ್ಥಳದ ವಿರೋಧವಾಗಿ ಕೂಡ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದೆ ಎಂದು ಆರೋಪಿಸಿದರು.ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷವಾಗಿ ಉಳಿದಿಲ್ಲ. ಅದು ಕಮ್ಯುನಿಸ್ಟ್ ಕಾಂಗ್ರೆಸ್ ಪಕ್ಷವಾಗಿ ಕೆಲಸ ಮಾಡುವುದಕ್ಕೆ ಪ್ರಾರಂಭಿಸಿದೆ ಎಂದು ಟೀಕಿಸಿದರು. ಕಮ್ಯುನಿಸ್ಟ್ ಚಿಂತನೆಗಳನ್ನು ಅವರು ಪೈಪೋಟಿಯಿಂದ ಮುಖ್ಯಮಂತ್ರಿ ಮೂಲಕ ಮಾಡಿಸುವುದಕ್ಕೆ ಹೊರಟಿದ್ದಾರೆ. ಈ ಕಾರಣದಿಂದ ಧರ್ಮಸ್ಥಳದಲ್ಲಿ ಅನಾಮಿಕ ವ್ಯಕ್ತಿ ಹುಟ್ಟಿಕೊಂಡಿದ್ದಾನೆ ಎಂದು ಅವರು ದೂರಿದರು.
ಎಸ್‍ಐಟಿ ಮುಖ್ಯಸ್ಥರು ಪೊಲೀಸ್ ಅಧಿಕಾರಿಗಳು ಅಲ್ಲ. ಎಸ್‍ಐಟಿಗೆ ಅನಾಮಿಕನೇ ಮುಖ್ಯಸ್ಥನಾಗಿದ್ದಾನೆ ಎಂದು ಆರೋಪಿಸಿದ ಅವರು. ಇಡೀ ಎಸ್‍ಐಟಿ ಅನಾಮಿಕನ ಕೈಕೆಳಗೆ ಕೆಲಸವನ್ನು ಮಾಡಬೇಕು ಮತ್ತು ಆತ ಹೇಳಿದಂತೆ ನಡೆದುಕೊಳ್ಳಬೇಕು ಎಂಬ ವಾತಾವರಣವನ್ನು ಸರ್ಕಾರ ಹುಟ್ಟಿಹಾಕಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ದೂರಿದರು.
