ಉದಯವಾಹಿನಿ, ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದುಗೊಂಡ ಹಿನ್ನೆಲೆಯಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಪುನಃ ಜೈಲು ಸೇರಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಇವರನ್ನು ಕಳುಹಿಸುವ ಮುನ್ನಾ ತೆಗೆದಿದ್ದ ಫೋಟೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಫೋಟೋದಲ್ಲಿ ನಟ ದರ್ಶನ್ ಬೋಳು ತಲೆ, ಸುಕ್ಕುಗಟ್ಟಿದ ಮುಖ ಹಾಗೂ ಬಿಳಿಗಡ್ಡದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ ಅವರ ಗೆಳತಿ ಪವಿತ್ರಾ ಗೌಡ ಮಾತ್ರ ನಗುಮುಖದಲ್ಲಿರುವುದು ಕಂಡುಬಂದಿದೆ.ನಟ ದರ್ಶನ್ ತೂಗುದೀಪ ಈ ಹಿಂದೆ ಜೈಲಿನಲ್ಲಿದ್ದಾಗ ವಿಗ್ ಧರಿಸಿಕೊಂಡಿದ್ದರು. ಆಗ ಪ್ರತಿಬಾರಿ ಅವರನ್ನು ಭೇಟಿಯಾಗಲು ಮನೆಯವರು ಜೈಲಿಗೆ ಹೋದಾಗ ವಿಗ್ ಹಾಕಿಕೊಂಡೇ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಇದೀಗ ಜೈಲಿನೊಳಗೆ ಹೋಗುವ ಮುನ್ನ ನಟ ದರ್ಶನ್ ಅವರು ನಿಜರೂಪದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ನಟಿ ಪವಿತ್ರಾ ಗೌಡ ಅವರು ಹಸನ್ಮುಖರಾಗಿಯೇ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಪವಿತ್ರಾ ಗೌಡ ಅವರನ್ನು ಪೊಲೀಸರು ಬಂಧಿಸಲು ಹೋದಾಗ ಮನೆಯಲ್ಲಿ ಮೇಕಪ್ ಮಾಡಿಕೊಂಡು ಅವರು ಹೊರಗೆ ಬಂದಿದ್ದರು. ಈ ವಿಚಾರವಾಗಿಯೂ ಅವರು ಟೀಕೆಗೆ ಗುರಿಯಾಗಿದ್ದರು. ಇದೀಗ ಅವರು ಜೈಲಿನಲ್ಲಿ ಫೋಟೊಗೆ ನಗುತ್ತಲೇ ಪೋಸ್ ನೀಡಿರುವುದು ಕಂಡುಬಂದಿದೆ.
