ಉದಯವಾಹಿನಿ, ನವದೆಹಲಿ: ಫಲಿತಾಂಶ ಪ್ರಕಟವಾದ ಬಳಿಕ ಬಳಿಕ ಹೈಕೋರ್ಟ್‌ನಲ್ಲಿ ದೂರು ದಾಖಲಿಸದೇ ಈಗ ಮತಗಳವಿನಂತಹ ಗಂಭೀರ ಆರೋಪದ ಮೂಲಕ ಜನರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿರುಗೇಟು ನೀಡಿದೆ.ರಾಹುಲ್ ಗಾಂಧಿ ಅವರ ಮತಗಳವು ಆರೋಪಕ್ಕೆ ಇಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಆಯೋಗದ ವಿರುದ್ಧ ಬಂದ ಎಲ್ಲಾ ಆರೋಪಗಳಿಗೆ ಉತ್ತರ ನೀಡಿದರು.ಕೆಲವರು ಮತಗಳವು ಆರೋಪ ಮಾಡಿದ್ದಾರೆ. ಈ ಆರೋಪಕ್ಕೆ ಸಾಕ್ಷ್ಯ ನೀಡುವಂತೆ ಕೇಳಿದರೆ ಉತ್ತರ ಸಿಗಲಿಲ್ಲ. ಇಂತಹ ಸುಳ್ಳು ಆರೋಪಕ್ಕೆ ಆಯೋಗ ಮತ್ತು ಮತದಾರರು ಹೆದರುವುದಿಲ್ಲ. ಆಯೋಗದ ಹೆಗಲ ಮೇಲೆ ಬಂದೂಕು ಇಟ್ಟು ಮತದಾರರನ್ನು ಗುರಿಯಾಗಿಸಿ ರಾಜಕೀಯ ಮಾಡಲಾಗುತ್ತಿದೆ. ಈ ಆರೋಪಗಳಿಗೆ ಆಯೋಗ ಹೆದರದೇ ಬಡವರು, ಮಹಿಳೆಯರು, ಯುವಜನತೆ ಎಲ್ಲಾ ಮತದಾರರ ಜೊತೆಗೆ ಯಾವುದೇ ಭೇದ ಭಾವ ಇಲ್ಲದೇ ನಿಲ್ಲುತ್ತದೆ.
ಮತದಾರರ ಪಟ್ಟಿ ಪರಿಷ್ಕರಣೆ ಮಾಡುವಾಗ ಸಿದ್ಧವಾಗಿರುವ ಪ್ರಕ್ರಿಯೆ ಅನುಸರಿಸಲಾಗುತ್ತದೆ. ಕೆಲವೊಮ್ಮೆ ಮಾಹಿತಿ ತಪ್ಪಾಗಿದ್ದರೆ ಅದನ್ನು ಸರಿಪಡಿಸಲು ಅವಕಾಶವಿದೆ. ಇದಕ್ಕೆ ಮತದಾರರ, ರಾಜಕೀಯ ಪಕ್ಷಗಳು, ಬೂತ್ ಲೆವೆಲ್ ಆಫೀಸರ್ (ಬಿಎಲ್‌ಓ) ಪಾಲುದಾರಿಕೆ ಬಹಳ ಮುಖ್ಯ. ಇದರಲ್ಲಿ ರಾಜ್ಯ ಸರ್ಕಾರದ ಅಧಿಕಾರಿಯೂ ಇರುತ್ತಾರೆ. ಅವರ ಮೂಲಕ ಎಲ್ಲ ಪ್ರಕ್ರಿಯೆ ನಡೆಯುತ್ತದೆ.
ಡ್ರಾಫ್ಟ್ ಮತ್ತು ಅಂತಿಮ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಜೊತೆಗೆ ಹಂಚಿಕೊಳ್ಳಲಾಗುತ್ತದೆ. ಇದರ ಮೇಲೂ ಸಮಸ್ಯೆ ಬಂದರೆ ಜಿಲ್ಲಾಧಿಕಾರಿಗೆ ಮನವಿ ಮಾಡಬಹುದು. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೂ ಮತದಾರರ ಪಟ್ಟಿ ನೀಡಲಾಗುತ್ತದೆ. ಬೂತ್ ಏಜೆಂಟ್ ಬಳಿಯೂ ಇದರ ಮಾಹಿತಿ ಇರುತ್ತದೆ. ಫಲಿತಾಂಶದ ಬಳಿಕವೂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಫಲಿತಾಂಶ ಪ್ರಶ್ನಿಸಬಹುದು. 45 ದಿನಗಳ ಬಳಿಕ ಯಾವುದೇ ದೂರು ದಾಖಲಿಸದೇ ಆರೋಪ ಮಾಡುವುದು ಕಾನೂನು ಬಾಹಿರ. 45 ದಿನಗಳಲ್ಲಿ ಬಾರದ ಅನುಮಾನ ಈಗ ಬರುವುದು ಅದರ ಉದ್ದೇಶ ಏನು ಜನರಿಗೆ ಗೊತ್ತಿದೆ.
