ಉದಯವಾಹಿನಿ, ನವದೆಹಲಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕ್ರಾಂತಿಯ ಹರಿಕಾರ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಲಿಂಗೈಕ್ಯರಾದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಪತ್ರದ ಮೂಲಕ ಸಂತಾಪ ಸೂಚಿಸಿದ್ದಾರೆ.
ಡಾ.ಶರಣಬಸಪ್ಪ ಅಪ್ಪ ಅವರನ್ನು ಕಳೆದುಕೊಂಡ ಅವರ ಕುಟುಂಬಕ್ಕೆ ಹಾಗೂ ದಾಕ್ಷಾಯಿಣಿ ಅಮ್ಮನವರಿಗೆ ದೇವರು ದು:ಖ ಸಹಿಸುವ ಶಕ್ತಿಯನ್ನು ನೀಡಲಿ. ಅಪ್ಪ ಅವರನ್ನು ಕಳೆದುಕೊಂಡಿದ್ದು ಅವರ ಕುಟುಂಬಕ್ಕೆ ಅಷ್ಟೇ ಅಲ್ಲದೆ ಭಕ್ತಗಣಕ್ಕೂ ನಷ್ಟ ಉಂಟಾಗಿದೆ. ಶರಣಬಸಪ್ಪ ಅವರ ಸಮಾಜ ಸೇವೆ, ಭಕ್ತರಿಗಾಗಿ ಅವರ ತ್ಯಾಗ, ಧಾರ್ಮಿಕ ಕ್ರಿಯೆ ಎಂದು ಮರೆಯಲಾಗದು. ಅದಲ್ಲದೇ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
90 ವರ್ಷದ ಶರಣಬಸಪ್ಪ ಅಪ್ಪ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕಲಬುರಗಿಯ ಶ್ರೀ ಶರಣಬಸವೇಶ್ವರ ಮಹಾಸಂಸ್ಥಾನ ಪೀಠದ 8ನೇ ಪೀಠಾಧಿಪತಿ ಶರಣಬಸಪ್ಪ ಅಪ್ಪ ಕಳೆದ ತಿಂಗಳು ಜು.26 ರಂದು ವಯೋಸಹಜ ಕಾಯಿಲೆ ಮತ್ತು ನ್ಯುಮೋನಿಯಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಕೃತಕ ಉಸಿರಾಟ ಮೂಲಕ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಗುರುವಾರ (ಆ.14) ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು. ಹೀಗಾಗಿ ಅವರನ್ನು ಮಠಕ್ಕೆ ಸ್ಥಳಾಂತರಿಸಲು ಕುಟುಂಬಸ್ಥರು ನಿರ್ಧರಿಸಿದ್ದರು. ಗೃಹ ಆರೈಕೆಗೆ ಕುಟುಂಬಸ್ಥರು ನಿರ್ಧರಿಸಿದ್ದರು. ರಾತ್ರಿ ಕಲಬುರಗಿಯ ಖಾಸಗಿ ಆಸ್ಪತ್ರೆಯಿಂದ ಶರಣಬಸಪ್ಪ ಅಪ್ಪ ಅವರನ್ನು ಮಠಕ್ಕೆ ಶಿಫ್ಟ್ ಮಾಡಲಾಗಿತ್ತು. ಜೊತೆಗೆ ಶರಣಬಸಪ್ಪ ಅಪ್ಪ ಅವರ ಅಂತಿಮ ಆಸೆ ಕೂಡ ಮಠಕ್ಕೆ ಹೋಗಬೇಕೆನ್ನುವುದಿತ್ತು. ತಮ್ಮ ಅಂತಿಮ ಇಚ್ಛೆಯಂತೆ, ಅಪ್ಪಾಜಿಯವರನ್ನು ಶರಣಬಸವೇಶ್ವರ ದೇವಾಲಯಕ್ಕೆ ಆರೋಗ್ಯಕರ ಉಸಿರಾಟದ ಸ್ಥಿತಿಯಲ್ಲಿ ಕೊಂಡೊಯ್ಯಲಾಗಿತ್ತು. ಅಲ್ಲಿ ಅಪ್ಪಾಜಿಯವರು ಗರ್ಭಗುಡಿಗೆ ಪ್ರವೇಶಿಸಿ ಶ್ರೀ ಶರಣಬಸವೇಶ್ವರರ ದರ್ಶನ ಪಡೆದರು. ಅದೇ ವೇಳೆ ಆರತಿ ಕೂಡ ನಡೆಯಿತು. ನಂತರ ವೈದ್ಯಕೀಯ ಮೇಲ್ವಿಚಾರಣೆಯ ವಾಹನದಲ್ಲಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಮಾಡಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!