ಉದಯವಾಹಿನಿ, ಪಾಟ್ನಾ: ಮತಗಳವು ಆರೋಪಕ್ಕೆ ಸಂಬಂಧಿಸಿದಂತೆ ಹೋರಾಟ ತೀವ್ರಗೊಂಡಿದ್ದು, ಬೆಂಗಳೂರು ಮತ್ತು ದೆಹಲಿಯಲ್ಲಿ ಪ್ರತಿಭಟನೆ ಬಳಿಕ ಈಗ ಬಿಹಾರದಲ್ಲಿ ಮತದಾರರ ಹಕ್ಕುಗಳ ಯಾತ್ರೆಗೆ ಇಂಡಿಯಾ ಒಕ್ಕೂಟದ ನಾಯಕರು ಚಾಲನೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಮಾಜಿ ಡಿಸಿಎಂ ತೇಜಸ್ವಿ ಯಾದವ್ ಸೇರಿ ಹಲವು ನಾಯಕರು ಸಸಾರಾಮ್‌ನಿಂದ ಯಾತ್ರೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಆರ್‌ಎಸ್‌ಎಸ್ (RSS) ವಿರುದ್ಧ ತೀವ್ರ ದಾಳಿ ನಡೆಸಿದರು. ಇದು ಸಂವಿಧಾನವನ್ನು ಉಳಿಸುವ ಹೋರಾಟ. ಇಡೀ ದೇಶದಲ್ಲಿ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಅದನ್ನು ಅಳಿಸಿಹಾಕಲು ಪ್ರಯತ್ನಿಸುತ್ತಿವೆ ಎಂದು ಕಿಡಿಕಾರಿದರು.ಚುನಾವಣಾ ಆಯೋಗದೊಂದಿಗೆ (Election Commission) ಒಪ್ಪಂದ ಮಾಡಿಕೊಳ್ಳುವ ಮೂಲಕ ಬಿಜೆಪಿಯು ವಿಧಾನಸಭಾ ಚುನಾವಣೆಯಿಂದ ಲೋಕಸಭೆ ಸ್ಪರ್ಧೆಗಳವರೆಗೆ ವ್ಯವಸ್ಥಿತವಾಗಿ ಚುನಾವಣೆಗಳಲ್ಲಿ ಅಕ್ರಮ ನಡೆಸುತ್ತಿದೆ. ಕರ್ನಾಟಕದ ಕನಿಷ್ಠ ಒಂದು ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ತಿರುಚಲಾಗಿದ್ದು, ಇದು ಬಿಜೆಪಿ ಗೆಲುವಿಗೆ ನೇರ ಕಾರಣ ಎಂದು ಆರೋಪಿಸಿದರು.
