ಉದಯವಾಹಿನಿ, ಅಮರಾವತಿ: ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮವರಂನಲ್ಲಿ 42 ವರ್ಷದ ಶೆಫ್ ಶೇಕ್ ಕೊತ್ವಾಲ್ ನೂರ್ ಮೊಹಮ್ಮದ್‌ನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನ (Pakistan) ಮೂಲದ ಭಯೋತ್ಪಾದಕ ಸಂಘಟನೆಗಳೊಂದಿಗೆ (Terrorist Groups) ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಅರೆಸ್ಟ್ ಮಾಡಲಾಗಿದೆ. ಮೊಹಮ್ಮದ್‌ನ ವರ್ತನೆಯ ಬಗ್ಗೆ ಅನುಮಾನಗೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.

ಅಧಿಕಾರಿಗಳ ಪ್ರಕಾರ, ನೂರ್ ಮೊಹಮ್ಮದ್ ಜೈಶ್-ಎ-ಮೊಹಮ್ಮದ್ (JeM) ಸೇರಿದಂತೆ ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದನೆಂದು ಶಂಕಿಸಲಾಗಿದೆ. ಧರ್ಮವರಂ ಉಪವಿಭಾಗೀಯ ಪೊಲೀಸ್ ಅಧಿಕಾರಿ ಯು. ನರ್ಸಿಂಗಪ್ಪ, “ಮೊಹಮ್ಮದ್ ಕೇವಲ ಭಯೋತ್ಪಾದಕ ವಿಷಯಗಳಿಂದ ಪ್ರಭಾವಿತನಾಗಿದ್ದಾನೆ. ಆದರೆ ಯಾವುದೇ ಕೃತ್ಯವನ್ನು ನಡೆಸಿಲ್ಲ ಅಥವಾ ಕೃತ್ಯ ನಡೆಸಿದ ಅವಕಾಶ ಪಡೆಯಲಿಲ್ಲ. ಉಗ್ರ ತರಬೇತಿ ಹೊಂದಿದ್ದಾನೆʼʼ ಎಂದು ತಿಳಿಸಿದ್ದಾರೆ.
ಪೊಲೀಸರು ಮೊಹಮ್ಮದ್ ಭಾರತೀಯ ನಾಗರಿಕನಾಗಿದ್ದು, ಧರ್ಮವರಂ ಮೂಲದವನು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಆತನ ಕುಟುಂಬವು ತಲೆಮಾರುಗಳಿಂದ ಈ ಪ್ರದೇಶದಲ್ಲೇ ವಾಸಿಸುತ್ತಿದ್ದು, ಯಾವುದೇ ವಿದೇಶಿ ಸಂಪರ್ಕವಿಲ್ಲ ಎಂದು ದೃಢಪಡಿಸಿದ್ದಾರೆ. ತನಿಖೆಯ ವೇಳೆ ಆತನ ಬಳಿಯಿಂದ ಕೆಲವು ಉಗ್ರವಾದಿ ಬರಹವನ್ನು ವಶಪಡಿಸಿಕೊಳ್ಳಲಾಗಿದ್ದು, ಇದನ್ನು ತೀವ್ರವಾಗಿ ಪರಿಶೀಲಿಸಲಾಗುತ್ತಿದೆ.
ಮೊಹಮ್ಮದ್‌ನ ಚಟುವಟಿಕೆಗಳು, ಉದ್ದೇಶಗಳು ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗಿನ ಸಂಭವನೀಯ ಸಂಪರ್ಕಗಳ ಬಗ್ಗೆ ಇನ್ನಷ್ಟು ವಿವರಗಳು ಖಚಿತವಾಗಬೇಕಿದೆ. ಪೂರ್ಣ ವಿಚಾರಣೆಯ ನಂತರವೇ ಆತ ಯಾವುದೇ ನಿರ್ದಿಷ್ಟ ಕೃತ್ಯವನ್ನು ಯೋಜಿಸಿದ್ದನಾ ಎಂಬುದು ತಿಳಿಯಲಿದೆ ಎಂದು ನರ್ಸಿಂಗಪ್ಪ ಹೇಳಿದ್ದಾರೆ.
ಪ್ರಸ್ತುತ, ಮೊಹಮ್ಮದ್ ಪೊಲೀಸ್ ವಶದಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಈ ಪ್ರಕರಣವನ್ನು ಎಚ್ಚರಿಕೆಯಿಂದ ನಿರ್ವಹಿಸಲಾಗುತ್ತಿದ್ದು, ಭಯೋತ್ಪಾದಕ ಜಾಲದೊಂದಿಗೆ ಆಳವಾದ ಸಂಪರ್ಕಗಳು ಕಂಡುಬಂದರೆ ಕೇಂದ್ರೀಯ ಏಜೆನ್ಸಿಗಳು ಸಹ ತನಿಖೆಯಲ್ಲಿ ಭಾಗಿಯಾಗಬಹುದು.

Leave a Reply

Your email address will not be published. Required fields are marked *

error: Content is protected !!