ಉದಯವಾಹಿನಿ, ಶಿವರಾಜ್‌ಕುಮಾರ್ ಅಭಿನಯದ ಡ್ಯಾಡ್ ಚಿತ್ರದ ಮುಹೂರ್ತ ಸಮಾರಂಭ ಸೋಮವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿ ದೇವಸ್ಥಾನದಲ್ಲಿ ನೆರವೇರಿತು. ಗೀತಾ ಶಿವರಾಜಕುಮಾರ್ ಅವರು ಚಿತ್ರದ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿ, ಚಿತ್ರತಂಡಕ್ಕೆ ಶುಭ ಕೋರಿದರು.
ಸುಮಾರು 32 ವರ್ಷಗಳ ಹಿಂದೆ ಶಿವರಾಜ್‌ಕುಮಾರ್ ಅಭಿನಯದ ‘ಜಗ ಮೆಚ್ಚಿದ ಹುಡುಗ’ ಚಿತ್ರ ಸಹ ಮೈಸೂರಿನ ಚಾಮುಂಡಿ ಬೆಟ್ಟದ ಬೃಹತ್ ನಂದಿ ವಿಗ್ರಹದ ಎದುರು ಶುರುವಾಗಿತ್ತು. ಈಗ ಅದೇ ನಂದಿ ದೇವಸ್ಥಾನದಲ್ಲಿ ಶಿವಣ್ಣ ಅಭಿನಯದ ಹೊಸ ಚಿತ್ರ ʼಡ್ಯಾಡ್ʼ ಚಿತ್ರಕ್ಕೆ ಚಾಲನೆ ಸಿಕ್ಕಿರುವುದು ವಿಶೇಷ. ಈ ಹಿಂದೆ ‘ಭಗವಂತ್ ಕೇಸರಿ’, ‘ಉಗ್ರಂ’, ‘ಟಕ್ ಜಗದೀಶ್’ ಮುಂತಾದ ತೆಲುಗು ಚಿತ್ರಗಳನ್ನು ನಿರ್ಮಿಸಿದ್ದ ಹರೀಶ್ ಪೆದ್ದಿ, ಈ ಚಿತ್ರವನ್ನು ಮೈರಾ ಕ್ರಿಯೇಷನ್ಸ್ ಲಾಂಛನದಡಿ ನಿರ್ಮಿಸುತ್ತಿದ್ದಾರೆ. ಇನ್ನು ತೆಲುಗಿನಲ್ಲಿ ‘ಅಸಾಧ್ಯುಡು’, ‘ಮಿಸ್ಟರ್ ನೂಕಯ್ಯ’ ಮತ್ತು ‘ಹಿಡಿಂಬ’ ಚಿತ್ರಗಳನ್ನು ನಿರ್ದೇಶಿಸಿರುವ ಅನಿಲ್ ಕನ್ನೆಗಂಟಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
