ಉದಯವಾಹಿನಿ, ಬೆಂಗಳೂರು: ನಗರ ಪ್ರದೇಶಗಳಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್‌ಗಳು ಸೇರಿದಂತೆ ಇತರೆ ಸಿಬ್ಬಂದಿಗಳು ಇನ್ನುಮುಂದೆ ಕಡ್ಡಾಯವಾಗಿ ಗ್ರಾಮೀಣಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ಕಾಯ್ದೆ ವಿಧಾನಪರಿಷತ್‌ನಲ್ಲಿ ಅಂಗೀಕಾರಗೊಂಡಿತು.
ತಿದ್ದುಪಡಿ ವಿಧೇಯಕ ಮಂಡಿಸಿ ಮಾತನಾಡಿದ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ನಗರ ಪ್ರದೇಶಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ನರ್ಸ್‌ಗಳು, ಡಿ ಗ್ರೂಪ್ ಸಿಬ್ಬಂದಿಗಳು ದೀರ್ಘಕಾಲದವರೆಗೂ ಒಂದೇ ಕಡೆ ಕೆಲಸ ಮಾಡುತ್ತಿದ್ದಾರೆ. ಪಾರದರ್ಶಕತೆ ತರುವ ಸಲುವಾಗಿ ಇವರನ್ನ ವರ್ಗಾವಣೆ ಮಾಡಿದರೆ ನ್ಯಾಯಾಲಯದ ಮೊರೆ ಹೋಗಿ ವರ್ಗಾವಣೆಗೆ ತಡೆಯಾಜ್ಞೆ ತರುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಇತರೆ ಸಿಬ್ಬಂದಿಗಳ ಕೊರತೆ ಉಂಟಾಗುತಿತ್ತು. ಇದನ್ನ ಸರಿದೂಗಿಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದರು. ಹಲವು ವರ್ಷಗಳ ಕಾಲ ಒಂದೇ ಕಡೆ ಕೆಲಸ ಮಾಡುತ್ತಿರುವ ವೈದ್ಯರಿಗೆ ಅಥವಾ ಬಡ್ತಿ ಸಂದರ್ಭದಲ್ಲಿ ಕಡ್ಡಾಯವಾಗಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕಿದೆ. ಈಗಾಗಲೇ 500 ವೈದ್ಯರು ಹಾಗೂ ಇನ್ನಿತರರನ್ನ ಕೌನ್ಸಿಲಿಂಗ್ ವರ್ಗಾವಣೆ ಮಾಡಲಾಗಿದೆ ಎಂದರು.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಎ,ಬಿ,ಸಿ,ಡಿ ಎಂದು ನಾಲ್ಕು ವಲಯಗಳನ್ನಾಗಿ ರೂಪಿಸಲಾಗಿದೆ. ಈ ವಲಯಗಳಲ್ಲಿ ಗರಿಷ್ಠ ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವವರು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಬೇಕಿದೆ. ಇನ್ನೂ ತಜ್ಞ ವೈದ್ಯರನ್ನ ಗುರುತಿಸಲಾದ ಹುದ್ದೆಗಳಲ್ಲಿ ಮುಂದುವರೆಸಲು ಹಾಗೂ ಚಿಕ್ಕ ಮಕ್ಕಳಿರುವ ಹಾಗೂ ನಿವೃತ್ತಿ ಅಂಚಿನಲ್ಲಿರುವ ವೈದ್ಯಾಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳಿಗೆ ತಿದ್ದುಪಡಿ ಕಾಯ್ದೆಯಲ್ಲಿ ವರ್ಗಾವಣೆಗೆ ವಿನಾಯಿತಿ ನೀಡಲಾಗಿದೆ ಎಂದರು. ಬಳಿಕ ಸದಸ್ಯರು ಒಕ್ಕೊರಲಿನಿಂದ ಮಸೂದೆಗೆ ಸಹಮತ ವ್ಯಕ್ತಪಡಿಸಿದ್ದರಿಂದ ವಿಧೇಯಕ ಪಾಸ್ ಆಯಿತು.

Leave a Reply

Your email address will not be published. Required fields are marked *

error: Content is protected !!