ಉದಯವಾಹಿನಿ, ರಾಯಚೂರು: ತುಂಗಭದ್ರಾ ಜಲಾಶಯದಿಂದ 1.30 ಲಕ್ಷ ಕ್ಯೂಸೆಕ್ ನೀರಿನ್ನು ನದಿಗೆ ಬಿಡಲಾಗಿದ್ದು, ಪರಿಣಾಮ ರಾಯಚೂರಿನ ಎಲೆಬಿಚ್ಚಾಲಿ ಗ್ರಾಮದಲ್ಲಿರುವ ಗುರುರಾಘವೇಂದ್ರ ಸ್ವಾಮಿಗಳ ಏಕಶಿಲಾ ವೃಂದಾವನ ಜಲಾವೃತವಾಗಿದೆ. ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿರುವುದರಿಂದ ಬಿಚ್ಚಾಲಮ್ಮ ದೇವಿ ದೇವಾಲಯ ಬಳಿಯ ರಾಯರ ವೃಂದಾವನಕ್ಕೆ ನೀರು ನುಗ್ಗಿದೆ. ಏಕಶಿಲಾ ವೃಂದಾವನ ದರ್ಶನ ಪಡೆಯಲು ಭಕ್ತರು ಪರದಾಡುತ್ತಿದ್ದು, ಅರ್ಚಕರು ನೀರಿನಲ್ಲೇ ತೆರಳಿ ಪೂಜೆ, ಅಭಿಷೇಕ ಮಾಡುತ್ತಿದ್ದಾರೆ. ಜೊತೆಗೆ ಗುರುರಾಘವೇಂದ್ರ ಸ್ವಾಮಿಗಳು ತಪಸ್ಸು ಮಾಡಿದ್ದ ಜಪದ ಕಟ್ಟೆ ಸಂಪೂರ್ಣ ಮುಳುಗಡೆಯಾಗಿದ್ದು, ಮಂತ್ರಾಲಯಕ್ಕೆ ಬರುವ ಭಕ್ತರು ಎಲೆಬಿಚ್ಚಾಲಿಗೆ ತಪ್ಪದೇ ಭೇಟಿ ನೀಡುತ್ತಾರೆ.
ರಾಯರ ಪರಮ ಭಕ್ತ ಅಪ್ಪಣ್ಣಾಚಾರ್ ನಿರ್ಮಿಸಿ ಪೂಜಿಸುತ್ತಿದ್ದ ವೃಂದಾವನ ಈಗ ಜಲಾವೃತವಾಗಿದೆ. ಎಲೆಬಿಚ್ಚಾಲಿಯ ಬಿಚ್ಚಾಲಮ್ಮ ದೇವಾಲಯ ಸುತ್ತಲೂ ನೀರು ಆವರಿಸಿದೆ. ಇಲ್ಲಿನ ಉಗ್ರನರಸಿಂಹ ದೇವಾಲಯ, ನಾಗದೇವತೆ ಕಟ್ಟೆ, ಶಿವಲಿಂಗ ಜಲಾವೃತವಾಗಿದ್ದು, ಮುಳುಗಡೆ ಹಂತದಲ್ಲಿವೆ. ತುಂಗಭದ್ರಾ ನದಿಗೆ ಇನ್ನೂ ಹೆಚ್ಚು ಪ್ರಮಾಣದ ನೀರು ಬಿಡುವ ಸಾಧ್ಯತೆಯಿದ್ದು, ಭಕ್ತರು ನದಿಗೆ ಇಳಿಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಒಂದೇ ತಿಂಗಳ ಅಂತರದಲ್ಲಿ 2ನೇ ಬಾರಿ ಜಾಲವೃತಗೊಂಡಿದೆ.
