ಉದಯವಾಹಿನಿ, ಭಾರತದಲ್ಲಿ ಜನ ಸಾಕು ಪ್ರಾಣಿಗಳನ್ನು ತಮ್ಮ ಕುಟುಂಬದ ಸದಸ್ಯರಂತೇ ಭಾವಿಸಿ ಸಾಕುತ್ತಾರೆ. ಮನುಷ್ಯರಂತೆ ಹೆಸರಿಟ್ಟು, ಮಗನೇ ಅಂತ ಕರೆಯೋದನ್ನ ನಾವೆಲ್ಲ ನೋಡಿದ್ದೇವೆ ಅಲ್ವಾ..?! ಅಷ್ಟೊಂದು ಮುದ್ದಾಗಿ ಸಾಕು ಪ್ರಾಣಿಗಳನ್ನು ನಮ್ಮ ಜನ ನೋಡಿಕೊಳ್ಳುತ್ತಾರೆ. ಇಷ್ಟೊಂದು ಮುದ್ದಾಗಿ ನೋಡಿಕೊಳ್ಳುವ ಪ್ರಾಣಿಗಳ ಆರೋಗ್ಯ ಸಹ ಮುಖ್ಯ ಅಲ್ವಾ..? ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಸಾಕುಪ್ರಾಣಿಗಳಿಗಾಗಿ ಬ್ಲಡ್ ಬ್ಯಾಂಕ್ ರಕ್ತದ ಲಭ್ಯತೆಯ ಬಗ್ಗೆ ಸುಲಭವಾಗಿ ಮಾಹಿತಿ ಸಿಗುವಂತೆ ಮಾಡಲು ಚಿಂತನೆ ನಡೆಸುತ್ತಿದೆ.
ಅಂದ ಹಾಗೆ ಭಾರತದಲ್ಲಿ ಇತ್ತೀಚೆಗೆ ಜನ ಅತೀ ಹೆಚ್ಚು ಸಾಕುಪ್ರಾಣಿಗಳನ್ನು ಸಾಕುತ್ತಿದ್ದಾರೆ. ಸುಮಾರು 53.6 ಕೋಟಿ ಜಾನುವಾರುಗಳು ಭಾರತದಲ್ಲಿವೆ! ಅವುಗಳಿಗೆ ಅಗತ್ಯ ಚಿಕಿತ್ಸೆಗಾಗಿ, ವ್ಯವಸ್ಥಿತವಾದ ಪ್ರಮಾಣೀಕೃತ ರಕ್ತನಿಧಿಗಳು ಇಲ್ಲ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಸಾಕು ಪ್ರಾಣಿಗಳಿಗಾಗಿ ಸುಲಭವಾಗಿ ಹಾಗೂ ಪ್ರಮಾಣಿಕೃತವಾದ ರಕ್ತನಿಧಿಗಳನ್ನು ಸ್ಥಾಪಿಸಿ, ಅದರ ಮಾಹಿತಿಗಳು, ರಕ್ತದ ಲಭ್ಯತೆ ಜನರಿಗೆ ಸುಲಭವಾಗಿ ಸಿಗುವಂತೆ ಮಾಡಲು ಮುಂದಾಗಿದೆ. ಇದಕ್ಕಾಗಿ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಸಾರ್ವಜನಿಕರ ಅಭಿಪ್ರಾಯವನ್ನೂ ಸಹ ಕೇಳಿದೆ. ಅಲ್ಲದೇ ರಕ್ತದಾನಕ್ಕೆ ಪ್ರಾಣಿಗಳಿಗೆ ಇರಬೇಕಾದ ಅರ್ಹತೆ ಹಾಗೂ ಮಾನದಂಡವನ್ನು ಮಾರ್ಗಸೂಚಿಯಲ್ಲಿ ಸರ್ಕಾರ ಪ್ರಕಟಿಸಿದೆ.
