ಉದಯವಾಹಿನಿ, ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನದ ನಡುವೆ 1947ರಿಂದಲೂ ಸಂಘರ್ಷ ನಡೆಯುತ್ತಲೇ ಇದೆ. ಈ ವೇಳೆ ಭಾರತದ ಹೆಚ್ಚಿನ ಅಲ್ಪಸಂಖ್ಯಾತ ಮಹಿಳೆಯರು ಬಲಿಯಾಗುತ್ತಿದ್ದಾರೆ. ಎರಡು ದೇಶಗಳ ನಡುವಿನ ಸಂಘರ್ಷದಲ್ಲಿ ಅಪಹರಣ, ಬಲವಂತದ ಮತಾಂತರ, ಬಾಲ್ಯ ವಿವಾಹ, ಕಳ್ಳಸಾಗಣೆ ಮೂಲಕ ಪಾಕಿಸ್ತಾನವು ಭಾರತೀಯ ಅಲ್ಪಸಂಖ್ಯಾತ ಮಹಿಳೆಯರ ಮೇಲೆ ದೌರ್ಜನ್ಯ (Sexual Violence) ನಡೆಸುತ್ತಿದೆ. 1971ರಿಂದ ಸಂಘರ್ಷದ ಸಂದರ್ಭಗಳಲ್ಲಿ ಪಾಕಿಸ್ತಾನ ಸೇನೆಯು ಅಲ್ಪಸಂಖ್ಯಾತ ಮಹಿಳೆಯರ ಮೇಲೆ ಲೈಂಗಿಕ ಹಿಂಸೆ ನೀಡುತ್ತಿದೆ ಎಂದು ಭಾರತ ಮಂಗಳವಾರ ವಿಶ್ವಸಂಸ್ಥೆ ಮಂಡಳಿಗೆ ಮತ್ತೆ ತಿಳಿಸಿದೆ.
ಸಂಘರ್ಷ ಸಂಬಂಧಿತ ಲೈಂಗಿಕ ದೌರ್ಜನ್ಯದ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಕ್ತ ಚರ್ಚೆಯಲ್ಲಿ ಮಾತನಾಡಿದ ಭಾರತದ ರಾಯಭಾರಿ ಎಲ್ಡೋಸ್ ಮ್ಯಾಥ್ಯೂ ಪುನ್ನೂಸ್, ಇಸ್ಲಾಮಾಬಾದ್ 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಿಂದ ಇದನ್ನು ನಡೆಸುತ್ತಿದ್ದು, ಇಂದಿಗೂ ಮುಂದುವರೆದಿದೆ. ಇದು ನಾಚಿಗೇಡಿನ ಸಂಗತಿ ಎಂದು ಹೇಳಿದರು. ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ಲಕ್ಷಾಂತರ ಮಹಿಳೆಯರ ಮೇಲೆ ಪಾಕಿಸ್ತಾನ ಸೇನೆ ಲೈಂಗಿಕ ದೌರ್ಜನ್ಯ ನಡೆಸಿತ್ತು. ಇದು ಇಂದಿಗೂ ನಿರ್ಭಯದಿಂದ ಮುಂದುವರೆದಿದೆ ಎಂದು ಅವರು ಹೇಳಿದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಪಡೆಯದ ಪಾಕಿಸ್ತಾನ ಅಪಹರಣ, ಬಲವಂತದ ಮತಾಂತರ, ಬಾಲ್ಯ ವಿವಾಹ, ಕಳ್ಳಸಾಗಣೆ ಮೂಲಕ ಅಲ್ಪಸಂಖ್ಯಾತ ಮಹಿಳೆಯರಿಗೆ ಕಿರುಕುಳ ನೀಡುವುದನ್ನು ಮುಂದುವರಿಸಿದೆ ಎಂದ ಪುನ್ನೂಸ್ ಈ ಕುರಿತು ಇತ್ತೀಚಿನ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವರದಿಗಳ ಮಾಹಿತಿಯನ್ನು ನೀಡಿದರು. ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತ ಸಮುದಾಯಗಳ ಮಕ್ಕಳು, ಮಹಿಳೆಯರ ಅಪಹರಣ, ಕಳ್ಳಸಾಗಣೆ, ಬಲವಂತದ ವಿವಾಹ, ಗೃಹ ಜೀತದಾಳುತನ, ಲೈಂಗಿಕ ಹಿಂಸೆ, ಬಲವಂತದ ಧಾರ್ಮಿಕ ಮತಾಂತರಗಳು ನಡೆದಿರುವುದು ದಾಖಲಿಸಲ್ಪಟ್ಟಿದೆ. ಪಾಕಿಸ್ತಾನದ ನ್ಯಾಯಾಂಗವು ಕೂಡ ಇಂತಹ ಅಪರಾಧಗಳನ್ನು ದೃಢೀಕರಿಸಿದೆ ಎಂದು ಹೇಳಿದರು.
