ಉದಯವಾಹಿನಿ, ದೆಹಲಿ: ಪ್ರಯಾಣಿಕನೊಬ್ಬನಿಗೆ ಚಲಿಸುತ್ತಿರುವ ರೈಲಿನಲ್ಲಿ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಕಾನ್‌ಸ್ಟೇಬಲ್ ಹಲ್ಲೆ ನಡೆಸುತ್ತಿರುವ ಆತಂಕಕಾರಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ (social media) ವೈರಲ್ ಆಗಿದೆ. ಆ ಅಧಿಕಾರಿ ಆ ವ್ಯಕ್ತಿಯನ್ನು ಪದೇ ಪದೇ ಹೊಡೆಯುವುದನ್ನು ಮತ್ತು ಯುವಕನನ್ನು ಲಗೇಜ್ ಸಹಿತ ರೈಲಿನಿಂದ ಹೊರಗೆ ತಳ್ಳಲು ಪ್ರಯತ್ನಿಸುವ ದೃಶ್ಯಾವಳಿಗಳು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
42 ಸೆಕೆಂಡುಗಳ ಈ ವಿಡಿಯೊದಲ್ಲಿ, ಪ್ರಯಾಣಿಕ ತನ್ನ ಮೇಲಿನ ಹಲ್ಲೆಯನ್ನು ವಿರೋಧಿಸುತ್ತಿದ್ದಂತೆ ಅವನನ್ನು ರೈಲ್ವೇ ಕೋಚ್‍ನ ಬಾಗಿಲಿನ ಕಡೆಗೆ ಆರ್‌ಪಿಎಫ್ ಪೊಲೀಸ್ ತಳ್ಳಿದ್ದಾರೆ. ಅಧಿಕಾರಿಯಿಂದ ನಿಂದಿಸಲ್ಪಟ್ಟಿದ್ದರೂ ಅವನು ಕ್ಷಮೆಯಾಚಿಸುತ್ತಿರುವುದನ್ನು ಸಹ ವಿಡಿಯೊದಲ್ಲಿ ನೋಡಬಹುದು. ಕಾನ್‌ಸ್ಟೇಬಲ್ ಆತನ ಮೇಲೆ ಆಕ್ರಮಣಕಾರಿಯಾಗಿ ಹಲ್ಲೆ ನಡೆಸುವುದು, ಅವನ ವಸ್ತುಗಳನ್ನು ಕಸಿದುಕೊಳ್ಳುವುದು ಮತ್ತು ಲಗೇಜ್ ಸಹಿತ ಪ್ರಯಾಣಿಕನನ್ನು ಹೊರಗೆ ತಳ್ಳಲು ಪ್ರಯತ್ನಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಈ ದೃಶ್ಯ ತೀವ್ರ ಟೀಕೆಗೆ ಗುರಿಯಾಗಿದೆ.
