ಉದಯವಾಹಿನಿ, ಹೈದರಾಬಾದ್: ಕುಡಿದ ಮತ್ತಿನಲ್ಲಿ ವೇಗವಾಗಿ ಬಂದ ಸ್ಕೂಟರ್ ಸವಾರನೊಬ್ಬ ಪೊಲೀಸ್ ಪೇದೆಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಆಘಾತಕಾರಿ ಘಟನೆ ತೆಲಂಗಾಣದ ಯದಾದ್ರಿ ಭುವನಗಿರಿ ಜಿಲ್ಲೆಯ ಪಂತಂಗಿ ಟೋಲ್ ಪ್ಲಾಜಾದಲ್ಲಿ ನಡೆದಿದೆ. ಟೋಲ್ ಗೇಟ್‍ನಲ್ಲಿ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಕೂಟರ್ ಡಿಕ್ಕಿ ಹೊಡೆದಿದ್ದರಿಂದ ಸಂಚಾರಿ ಪೊಲೀಸ್ ಪೇದೆ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೇದೆಯನ್ನು ಆಸೀಫ್ ಎಂದು ಗುರುತಿಸಲಾಗಿದೆ. ಈ ಘಟನೆಯ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸ್ ಪೇದೆಗೆ ಡಿಕ್ಕಿ ಹೊಡೆದು ಪರಾರಿಯಾಗಿರುವವನ್ನು ವಿಶಾಲ್ ಎಂದು ಗುರುತಿಸಲಾಗಿದೆ. ಮದ್ಯದ ಮತ್ತಿನಲ್ಲಿದ್ದ ಆರೋಪಿಯು ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸಿದಲ್ಲದೆ, ಕರ್ತವ್ಯ ನಿರತ ಪೊಲೀಸ್ ಪೇದೆಗೆ ಡಿಕ್ಕಿ ಹೊಡಿದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಪೇದೆ ರಸ್ತೆ ಮಧ್ಯದಲ್ಲೇ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಹೈದರಾಬಾದ್‌ನ ಯಶೋದಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.
