ಉದಯವಾಹಿನಿ, ನವದೆಹಲಿ: ಅಡಿಕೆ ಬೆಳೆಯನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರ ಇಡಬೇಕು ಮತ್ತು ಹಳದಿ ಎಲೆ ರೋಗ ಬಂದ ಭೂಮಿಗೆ ಕೇಂದ್ರ ಸರ್ಕಾರ ಒಮ್ಮೆ ನೀಡಬಹುದಾದ ಪರಿಹಾರ ನೀಡಬೇಕು ಎಂದು ರಾಜ್ಯ ಸಂಸದರ ನಿಯೋಗ ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾನ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಮನವಿ ಮಾಡಿದೆ.ಅಡಿಕೆ ಬೆಳೆಗಾರರ ಸಮಸ್ಯೆ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯುವ ದೃಷ್ಠಿಯಿಂದ ರಾಜ್ಯ ಸಂಸದರ ನಿಯೋಗ ಕೇಂದ್ರ ಸಚಿವರ ಭೇಟಿಯಾಗಿ ಚರ್ಚಿಸಿದೆ. ಭೇಟಿ ವೇಳೆ ಕರ್ನಾಟಕ ಸೇರಿ ದೇಶದ ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗೆಡೆ ಕಾಗೇರಿ, WHOದಿಂದ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ, ಕ್ಯಾನ್ಸರ್‌ಗೆ ಕಾರಣ ಆಗುತ್ತದೆ ಎಂದು ಹೇಳಿದೆ. ಈ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಕೋರ್ಟ್ ಕೇಂದ್ರಕ್ಕೆ ವರದಿ ಕೇಳಿದೆ. ವರದಿ ವಿಳಂಬವಾಗುತ್ತಿರುವ ಹಿನ್ನಲೆ ಕೇಂದ್ರ ಸರ್ಕಾರದ ಅಧ್ಯಯನ ವರದಿ ಶೀಘ್ರ ಕೋರ್ಟ್‌ಗೆ ಸಲ್ಲಿಸಬೇಕು ಮತ್ತು ಅಧ್ಯಯನ ಮಾಡುತ್ತಿರುವ ಉನ್ನತ ಸಮಿತಿ ಜೊತೆಗೆ ಒಂದು ಸಭೆ ಏರ್ಪಡಿಸಲು ಮನವಿ ಮಾಡಿದ್ದೇವೆ ಎಂದರು.
