ಉದಯವಾಹಿನಿ, ಲಕ್ನೋ: ಗ್ರೇಟರ್ ನೋಯ್ಡಾದಲ್ಲಿ ವರದಕ್ಷಿಣೆಗಾಗಿ (Dowry) ಪತ್ನಿಯ ಮೇಲೆ ಹಲ್ಲೆ ಮಾಡಿ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದ ಪ್ರಮುಖ ಆರೋಪಿ ವಿಪಿನ್ ಭಾಟಿ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ. ಆರೋಪಿ ವಿಪಿನ್‌ನನ್ನು ಪೊಲೀಸರು ಸ್ಥಳಮಹಜರಿಗೆ ಕರೆದೊಯ್ಯುತ್ತಿದ್ದಾಗ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಅಲ್ಲದೇ ಪೊಲೀಸರ ಕೈಯಿಂದ ಪಿಸ್ತೂಲ್ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ, ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊಲೆಯಾದ ನಿಕ್ಕಿ (28) ತಂದೆ ಬಿಖಾರಿ ಸಿಂಗ್ ಪೈಲಾ ಅವರು, ಆರೋಪಿಗಳಿಗೆ ಗುಂಡು ಹಾರಿಸಬೇಕು ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು. ಈ ಹೇಳಿಕೆ ನೀಡಿ ಕೆಲವೇ ಗಂಟೆಗಳ ನಂತರ ಪ್ರಮುಖ ಆರೋಪಿಯ ಕಾಲಿಗೆ ಗುಂಡು ಹಾರಿಸಲಾಗಿದೆ.
ಆರೋಪಿ ವಿಪಿನ್ ಆಸ್ಪತ್ರೆಯ ಬೆಡ್ ಮೇಲೆ, ತನ್ನ ಕೃತ್ಯಕ್ಕೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದಿದ್ದಾನೆ. ತಾನು ಪತ್ನಿಯನ್ನು ಕೊಂದಿಲ್ಲ ಮತ್ತು ಅವಳು ತಾನಾಗಿಯೇ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾಳೆ. ಗಂಡ ಹೆಂಡತಿಯರ ನಡುವೆ ಆಗಾಗ ಜಗಳಗಳು ನಡೆಯುತ್ತವೆ. ಇದು ತುಂಬಾ ಸಾಮಾನ್ಯ ಎಂದು ಹೇಳಿಕೊಂಡಿದ್ದಾನೆ.
