ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಮಳೆಗೆ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಹಾವೇರಿ, ಧಾರವಾಡ, ಬಳ್ಳಾರಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರಿಗೆ ನಿರಂತರ ಮಳೆಯಿಂದಾಗಿ ಬೆಳೆ ಕಳೆದುಕೊಳ್ಳುವ ಭೀತಿ ಎದುರಾಗಿದೆ. ನದಿ ಪ್ರವಾಹಕ್ಕೆ ಮೆಕ್ಕೆಜೋಳ, ಮೆಣಸಿನಕಾಯಿ ಸೇರಿದಂತೆ ತೋಟಗಾರಿಕೆ ಬೆಳೆಗಳು ಸಂಪೂರ್ಣ ನಾಶವಾಗಿದೆ. ಸಾಲಸೂಲ ಮಾಡಿ ಬಿತ್ತನೆ ಮಾಡಿದ ಅನ್ನದಾತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ತುಂಗಭದ್ರಾ, ವರದಾ, ಕುಮುದ್ವತಿ ಹಾಗೂ ಧರ್ಮಾ ನದಿಗಳು ತುಂಬಿ ಹರಿಯುತ್ತಿವೆ. ನದಿಪಾತ್ರದಲ್ಲಿರೋ ಜಮೀನಿನಲ್ಲಿ ಬೆಳೆದಿರುವ ಮೆಕ್ಕೆಜೋಳ, ಹತ್ತಿ, ಕಬ್ಬು ಹಾಗೂ ಸೋಯಾಬೀನ್ ಬೆಳೆಗಳು ನಾಶವಾಗಿವೆ. ಪ್ರತಿ ಎಕರೆ 15 ರಿಂದ 20 ಸಾವಿರ ರೂ. ಖರ್ಚು ಮಾಡಿ ಬೆಳೆದಿದ್ದ ರೈತರು (Farmers) ಕಂಗಾಲಾಗಿದ್ದಾರೆ.
ಬಳ್ಳಾರಿ ಜಿಲ್ಲೆಯಾದ್ಯಂತ ವಾರದಿಂದ ಸುರಿಯುತ್ತಿರೋ ಜಿಟಿ ಜಿಟಿ ಮಳೆ ಹಿನ್ನೆಲೆ, ಮೆಣಸಿನಕಾಯಿ ಬೆಳೆಗೆ ಕೊಳೆ ರೋಗದ ಭಾದೆ ಶುರುವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಕಾಂಡ ಕೊಳೆಯುವಿಕೆ, ಕಾಂಡ ಕೊರಕ, ಎಲೆ ಚುಕ್ಕಿ ಹಳದಿ ರೋಗದಿಂದ ಬಳಲುತ್ತಿರುವ ಮೆಣಸಿನಕಾಯಿ ಬೆಳೆ ಉಳಿಸಿಕೊಳ್ಳಲು ರೈತರು ಹೆಣಗಾಡ್ತಿದ್ದಾರೆ.
