ಉದಯವಾಹಿನಿ, ನವದೆಹಲಿ: ಭಾರತವು, ಪಾಕಿಸ್ತಾನದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಸೆಪ್ಟೆಂಬರ್ 24ರವರೆಗೆ ಮುಚ್ಚುವ ಆದೇಶವನ್ನು ವಿಸ್ತರಿಸಿದೆ. ಇದಕ್ಕೆ ಕೆಲವೇ ದಿನಗಳ ಮೊದಲು ಪಾಕಿಸ್ತಾನ ಕೂಡ ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಸೆಪ್ಟೆಂಬರ್ 24ರವರೆಗೆ ಮುಚ್ಚುವ ಆದೇಶ ಹೊರಡಿಸಿತ್ತು. ಎರಡೂ ರಾಷ್ಟ್ರಗಳು ಈ ವಾಯುಪ್ರದೇಶ ಮುಚ್ಚುವುದನ್ನು ವಿಸ್ತರಿಸಿರುವ ‘ನೋಟಿಸ್ ಟು ಏರ್‌ಮೆನ್’ (ನೋಟಾಮ್) ಅಧಿಸೂಚನೆಗಳನ್ನು ಬಿಡುಗಡೆ ಮಾಡಿವೆ. ನೋಟಾಮ್ ಎಂಬುದು ವಿಮಾನ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿಗೆ ಅಗತ್ಯವಾದ ಮಾಹಿತಿಯನ್ನು ಒಳಗೊಂಡಿರುವ ಅಧಿಕೃತ ಸೂಚನೆಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ನಂತರ, ಭಾರತವು ಏಪ್ರಿಲ್ 30ರಿಂದ ಪಾಕಿಸ್ತಾನದ ವಿಮಾನ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ, ಒಡೆತನದ ಅಥವಾ ಗುತ್ತಿಗೆಗೆ ಪಡೆದ ವಿಮಾನಗಳು ಸೇರಿದಂತೆ ಸೈನಿಕ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿತು. ಆಗಸ್ಟ್ 22ರಂದು ಜಾರಿಗೊಳಿಸಿದ ನೋಟಾಮ್ ಪ್ರಕಾರ, ಸೆಪ್ಟೆಂಬರ್ 23ರ ರಾತ್ರಿ 11:59ರವರೆಗೆ (ಯುಟಿಸಿ ಸಮಯದಲ್ಲಿ, ಸೆಪ್ಟೆಂಬರ್ 24 ಬೆಳಗ್ಗೆ 5:30) ಪಾಕಿಸ್ತಾನದ ವಿಮಾನಗಳಿಗೆ ಭಾರತದ ವಾಯುಪ್ರದೇಶ ಲಭ್ಯವಿರುವುದಿಲ್ಲ. ಪಾಕಿಸ್ತಾನವು ಆಗಸ್ಟ್ 20ರಂದು ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚುವ ನೋಟಾಮ್ ಜಾರಿಗೊಳಿಸಿತು.
